ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳ ಬ್ಯಾಗ್ ತೂಕ ಇಳಿಕೆ : 2ನೇ ತರಗತಿವರೆಗೆ ಹೋಮ್ ವರ್ಕ್ ಇಲ್ಲ

ಹೊಸದಿಲ್ಲಿ : ಇನ್ನು ಮುಂದೆ ಎರಡನೇ ತರಗತಿವರೆಗಿನ ಮಕ್ಕಳಿಗೆ ಹೋಮ್ ವರ್ಕ್ ಇರುವುದಿಲ್ಲ.

ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ಅವರ ದೇಹತೂಕದ ಶೇಕಡ 10ಕ್ಕಿಂತ ಹೆಚ್ಚು ಭಾರದ ಸ್ಕೂಲ್ ಬ್ಯಾಗ್ ಗಳನ್ನು ಹೊರಿಸುವಂತಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ.

ಕೇಂದ್ರ ಶಿಕ್ಷಣ ಸಚಿವಾಲಯದ 'ಪಾಲಿಸಿ ಆನ್ ಸ್ಕೂಲ್ ಬ್ಯಾಗ್ 2020' ಅನ್ವಯ ಶಾಲಾ ಮಕ್ಕಳ ಬ್ಯಾಗ್ ತೂಕವನ್ನು ನಿಯತವಾಗಿ ಶಾಲೆಗಳಲ್ಲಿ ಗಮನಿಸುತ್ತಿರಬೇಕು.

ಇದು ಲಘು ತೂಕದ್ದಾಗಿದ್ದು, ಎರಡು ಪಟ್ಟಿಗಳನ್ನು ಹೊಂದಿ ಮಕ್ಕಳ ಹೆಗಲಿನ ಎರಡೂ ಬದಿಗೆ ಸಮತೂಕ ಹಾಕುವ ರೀತಿಯಲ್ಲಿ ಇರಬೇಕು ಹಾಗೂ ಚಕ್ರ ಇರುವ ಸ್ಕೂಲ್ ಬ್ಯಾಗ್ ಗಳಿಗೆ ಅವಕಾಶ ಇರುವುದಿಲ್ಲ.

ಪ್ರಕಾಶಕರು ಮುದ್ರಿಸುವ ಪಠ್ಯಪುಸ್ತಕದ ತೂಕವನ್ನೂ ಈ ನೀತಿ ಶಿಫಾರಸು ಮಾಡಿದೆ.

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ ಟಿ) ನಡೆಸಿದ ಹಲವು ಸಮೀಕ್ಷೆ ಮತ್ತು ಅಧ್ಯಯನಗಳ ಆಧಾರದಲ್ಲಿ ಈ ಶಿಫಾರಸು ಮಾಡಲಾಗಿದೆ.

ದೇಶಾದ್ಯಂತ 352 ಶಾಲೆಗಳ 3,624 ವಿದ್ಯಾರ್ಥಿಗಳು ಹಾಗೂ 2,992 ಪೋಷಕರನ್ನು ಸಮೀಕ್ಷೆಗೆ ಒಳಪಡಿಸಿ ಈ ಮಾಹಿತಿ ಸಂಗ್ರಹಿಸಲಾಗಿದೆ ಎಂದು ನೀತಿಯಲ್ಲಿ ವಿವರಿಸಲಾಗಿದೆ.

ಎಲ್ಲ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಮಧ್ಯಾಹ್ನದ ಊಟ, ಕುಡಿಯಲು ಶುದ್ಧ ನೀರು ಒದಗಿಸುವ ಮೂಲಕ ಮಕ್ಕಳು ಲಂಚ್ ಬಾಕ್ಸ್ ಮತ್ತು ನೀರಿನ ಬಾಟಲಿ ಒಯ್ಯುವುದನ್ನು ತಪ್ಪಿಸಬೇಕು ಎನ್ನುವ ಶಿಫಾರಸ್ಸು ಸೇರಿದೆ.

ಪುಸ್ತಕ ಬ್ಯಾಂಕ್ ಮೂಲಕ ವಿಶೇಷ ಅಗತ್ಯತೆಯ ಮಕ್ಕಳಿಗೆ ಎರಡು ಸೆಟ್ ಪುಸ್ತಕಗಳನ್ನು ಒದಗಿಸಬೇಕು ಮತ್ತು ಶಾಲೆಗಳಲ್ಲಿ ಇದಕ್ಕೆ ಲಾಕರ್ಗಳನ್ನು ಒದಗಿಸಬೇಕು ಎಂದೂ ಶಿಫಾರಸು ಮಾಡಿದೆ.

ಪ್ರಾಥಮಿಕ ಪೂರ್ವ ಮಕ್ಕಳಿಗೆ ಯಾವುದೇ ಬ್ಯಾಗ್ ಇಲ್ಲ; 1 ಮತ್ತು 2ನೇ ತರಗತಿ ಮಕ್ಕಳ ಬ್ಯಾಗ್ 1.6 ಕೆಜಿಯಿಂದ 2.2 ಕೆಜಿ ಒಳಗಿರಬೇಕು.

ಅಂತೆಯೇ 3 ರಿಂದ 5, 6 ಮತ್ತು 7, 8, 9, 10, 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್ ತೂಕ ಕ್ರಮವಾಗಿ 1.7 ಕೆಜಿ- 2.5 ಕೆಜಿ, 2 ಕೆಜಿ- 3 ಕೆಜಿ, 2.5 ಕೆಜಿ- 4ಕೆಜಿ, 2.5 ಕೆಜಿ-4.5ಕೆಜಿ ಮತ್ತು 3.5ಕೆಜಿ-5 ಕೆಜಿ ಇರಬೇಕು ಎಂದು ಹೇಳಿದೆ.

Edited By : Nirmala Aralikatti
PublicNext

PublicNext

10/12/2020 07:46 am

Cinque Terre

46.85 K

Cinque Terre

2