ಬೆಂಗಳೂರು: ನಾಲ್ವರು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಮಾತ್ರಕ್ಕೆ ವಿದ್ಯಾಗಮ ಯೋಜನೆಯೇ ವಿಫಲ ಎಂದು ಬಿಂಬಿಸುವುದು ಸರಿಯಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದ್ದಾರೆ.
ಕಲಬುರ್ಗಿ ಜಿಲ್ಲೆಯ ಮಾಶಾಳ ಗ್ರಾಮದಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದೆ ಎಂಬ ವರದಿ ಕುರಿತು ಪ್ರತಿಕ್ರಿಯಿಸಿರುವ ಸಚಿವರು, 'ಶಾಲೆ ಮುಚ್ಚಿರುವ ಸಮಯದಲ್ಲಿಯೂ ಮಕ್ಕಳ ಕಲಿಕೆ ನಿರಂತರವಾಗಿರಬೇಕು ಎಂಬ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. ಮಾಶಾಳದ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಿಗೆ ತಿಂಗಳ ಹಿಂದೆ ಸೋಂಕು ತಗುಲಿದ್ದು, ಅವರು ಈಗ ಪೂರ್ಣ ಗುಣಮುಖರಾಗಿದ್ದಾರೆ. ಈ ಅವಧಿಯಲ್ಲಿ ಶಾಲೆಯ ಯಾವುದೇ ಶಿಕ್ಷಕರಿಗೆ ಸೋಂಕು ತಗುಲಿಲ್ಲ’ ಎಂದು ಸ್ಪಷ್ಟನೆ ನೀಡಿದರು.
ಮಾಶಾಳದ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸೆ.22ರಂದು 203 ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಈ ಪೈಕಿ ನಾಲ್ಕು ಮಕ್ಕಳಿಗಳಿಗೆ ಸೋಂಕು ಇರುವುದು ದೃಢಪಟ್ಟಿದೆ. ಶಾಲಾ ಆವರಣದಲ್ಲಿ ಮಕ್ಕಳಿಗೆ ಸೋಂಕು ತಗುಲಿರುವುದು ಸಾಧ್ಯವಿಲ್ಲ ಎಂಬ ಅಂಶಗಳನ್ನು ಸ್ಥಳೀಯ ಜಿಲ್ಲಾ ಉಪನಿರ್ದೇಶಕರು ದೃಢಪಡಿಸಿದ್ದಾರೆ. ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ ಎಂಬುದು ಸತ್ಯವಲ್ಲ' ಎಂದು ಹೇಳಿದರು.
PublicNext
10/10/2020 11:00 am