ದಾವಣಗೆರೆ: ನಕಲಿ ಬಂಗಾರ ನೀಡಿ ವಂಚಿಸಿದ್ದ, ಕೇರಳ ಮೂಲದ ವೈಯನಾಡಿನ ಆರೋಪಿ ಗಿರೀಶ್ ಎಂಬಾತನನ್ನು ಡಿಸಿಐಬಿ ಘಟಕದ ಪೊಲೀಸರು ಬಂಧಿಸಿ, ಬಂಧಿತನಿಂದ 22 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಕೆಲವರು ಪರಾರಿಯಾಗಿದ್ದು, ಪತ್ತೆಗೆ ಬಲೆ ಬೀಸಿದ್ದಾರೆ.
ದಾವಣಗೆರೆ ನಗರದ ಪಿ. ಬಿ. ರಸ್ತೆಯ ಟಯೋಟ ಶೋ ರೂಂ ಬಳಿ ನಕಲಿ ಬಂಗಾರ ನೀಡಿ ಕೇರಳ ಮೂಲದ ವ್ಯಕ್ತಿಗೆ 30 ಲಕ್ಷ ರೂಪಾಯಿ ವಂಚಿಸಲಾಗಿತ್ತು. ಈ ಸಂಬಂಧ ಕಳೆದ ಮಾರ್ಚ್ ತಿಂಗಳಿನಲ್ಲಿ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗಿ ಆರೇಳು ತಿಂಗಳು ಕಳೆದರೂ ಆರೋಪಿಗಳು ಪತ್ತೆಯಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಡಿಸಿಐಬಿ ಘಟಕಕ್ಕೆ ಪ್ರಕರಣ ವರ್ಗಾಯಿಸಲಾಗಿತ್ತು. ಬಳಿಕ ತನಿಖೆ ಕೈಗೆತ್ತಿಕೊಂಡ ಡಿಸಿಐಬಿ ಘಟಕದ ಸಿಬ್ಬಂದಿ ಬೆಂಗಳೂರು, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಹುಡುಕಾಟ ನಡೆಸಿದ್ದರು. ಬಳಿಕ ಖಚಿತ ಮಾಹಿತಿ ಆಧರಿಸಿ ಕೇರಳ ಮೂಲದ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಕರ್ನಾಟಕದಲ್ಲಿ ಮೇಲಿಂದ ಮೇಲೆ ಮೋಸ ಮಾಡುವ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆ ಆರೋಪಿಗಳ ಜಾಲ ತಮಿಳುನಾಡು ಹಾಗೂ ಆಂಧ್ರಪ್ರದೇಶದತ್ತ ಚಿತ್ತ ಹಾಯಿಸಿದೆ. ಈಗಾಗಲೇ ದಾವಣಗೆರೆ ಜಿಲ್ಲೆಯೊಂದರಲ್ಲಿಯೇ ಏಳೆಂಟು ಬಾರಿ ಮೋಸ ಮಾಡಿ ಸಿಕ್ಕಿಬಿದ್ದಿರುವ ಆರೋಪಿಗಳು, ಮತ್ತೆ ಇಲ್ಲಿ ಇದೇ ಕೃತ್ಯ ಎಸಗಿದರೆ ಸಿಕ್ಕಿಬೀಳುವ ಆತಂಕದಲ್ಲಿ ಆ ರಾಜ್ಯಗಳಲ್ಲಿ ಮೋಸ ಮಾಡಲು ಶುರು ಮಾಡಿದ್ದಾರೆ ಎಂಬ ಮಾಹಿತಿ ಇದೆ ಎಂದು ಎಸ್ಪಿ ಸಿ. ಬಿ. ರಿಷ್ಯಂತ್ ತಿಳಿಸಿದರು.
PublicNext
30/09/2022 09:37 am