ಕಾರವಾರ: ಸಾಮಾನ್ಯವಾಗಿ ದೇವಸ್ಥಾನ ಅಂದ್ರೆ ಪ್ರತಿನಿತ್ಯ ತ್ರಿಕಾಲ ಪೂಜೆ, ಭಕ್ತರಿಗೆ ದರ್ಶನ ಹೀಗೆ ವಿವಿಧ ಧಾರ್ಮಿಕ ಚಟುವಟಿಕೆ ನಡೆಯುತ್ತಿರುತ್ತದೆ. ಆದ್ರೆ, ವರ್ಷವಿಡೀ ದೇವಸ್ಥಾನದ ಬಾಗಿಲು ಮುಚ್ಚಿದ್ದು, ವರ್ಷದಲ್ಲಿ ಕೇವಲ 7 ದಿನ ಮಾತ್ರ ಭಕ್ತರಿಗೆ ದರ್ಶನ ಕೊಡುವ ದೇವಾಲಯ ಬಗ್ಗೆ ಎಲ್ಲಾದ್ರೂ ಕೇಳಿದ್ದೀರಾ!? ಆದರೆ, ಇಂಥದ್ದೊಂದು ದೇವಾಲಯ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೋಣ ಗ್ರಾಮದಲ್ಲಿದೆ!
ಇಲ್ಲಿನ ಸಾತೇರಿ ದೇವಸ್ಥಾನದಲ್ಲಿ ದೇವಿ ದರ್ಶನಕ್ಕೆ ವರ್ಷದಲ್ಲಿಸಪ್ತ ದಿನ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ. ಹೀಗಾಗಿ ಕಳೆದೆರಡು ದಿನಗಳಿಂದ ದೇವಿ ಜಾತ್ರೋತ್ಸವ ಪ್ರಾರಂಭವಾಗಿದ್ದು, ಇಂದಿನಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಹಲವೆಡೆಗಳಿಂದ ಆಗಮಿಸಿದ್ದ ಭಕ್ತರು ಸಾತೇರಿ ದೇವಿಗೆ ವಿವಿಧ ಸೇವೆ ಅರ್ಪಿಸಿದರು.
ಇನ್ನು, ಸಾತೇರಿ ದೇವಿ ತನ್ನ ಭಕ್ತರ ಕಷ್ಟ ನಿವಾರಿಸಿ, ನೆರವಿನ ಅಗತ್ಯವಿದ್ದರೆ ಭಕ್ತರ ಸಮ್ಮುಖ ಪ್ರತ್ಯಕ್ಷಳಾಗಿ ಸಂಕಷ್ಟ ನಿವಾರಿಸುತ್ತಿದ್ದಾಳಂತೆ. ಒಮ್ಮೆ ದೇವಿ ಬಾವಿ ಪಕ್ಕದಲ್ಲಿ ಸ್ನಾನ ಮಾಡಿ ಕೂದಲು ಬಾಚಿಕೊಳ್ಳುವಾಗ ಒಬ್ಬ ದುಷ್ಟನ ಕಣ್ಣು ದೇವಿ ಮೇಲೆ ಬಿದ್ದು ದೇವಿಯ ಬಳಿ ಬಂದಾಗ ಆಕೆ ಬಾವಿಗೆ ಹಾರಿ ಅದೃಶ್ಯಳಾದಳಂತೆ!
ಬಳಿಕ ಊರಿನ ಹಿರಿಯರೊಬ್ಬರಿಗೆ ದೇವಿ ಕನಸಿನಲ್ಲಿ ಬಂದು ತಾನು ಬಾವಿಯಲ್ಲಿ ಅದೃಶ್ಯಳಾಗಿದ್ದು ತಾನು ನೆಲೆಸಿರುವ ಸ್ಥಳದಲ್ಲೇ ಸಣ್ಣ ಗುಡಿ ಕಟ್ಟಿಕೊಡುವಂತೆ ಹೇಳಿ ವರ್ಷದಲ್ಲಿ 7 ದಿನಗಳ ಕಾಲ ಮಾತ್ರ ತಾನು ದರ್ಶನ ನೀಡುವುದಾಗಿ ತಿಳಿಸಿದ್ದಾಳಂತೆ. ಅದರಂತೆ ಈ ಜಾಗದಲ್ಲಿ ಚಿಕ್ಕ ಗುಡಿ ಕಟ್ಟಲಾಯಿತು. ಭಾದ್ರಪದ ಮಾಸ, ಶುಕ್ಲಪಕ್ಷದಂದು ದೇವಸ್ಥಾನದ ಬಾಗಿಲು ತೆರೆದು 7 ದಿನಗಳ ವರೆಗೆ ಭಕ್ತರಿಗೆ ದರ್ಶನ ಭಾಗ್ಯ ದೊರಕಿಸಿ ಕೊಡಲಾಗುತ್ತಿದೆ.
PublicNext
05/09/2022 07:45 pm