ಬಜಪೆ: ಇಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳೆಲ್ಲ ಯಾಂತ್ರೀಕರಣಗೊಂಡಿವೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಇಲ್ಲೊಂದು ಕಡೆ ಕೃಷಿ ಕಾರ್ಯವನ್ನು ಸಾಂಪ್ರದಾಯಿಕವಾಗಿ ಮಾಡುತ್ತಾ ಬಂದಿರುವುದು ವಿಶೇಷವೇ ಸರಿ! ಪಡುಪೆರಾರ ಗ್ರಾಮದ ಕಬೆತ್ತಿಗುತ್ತುವಿನಲ್ಲಿ ಕಂಬಳದ ಗದ್ದೆಗೆ (ಬಾರೆಪಾಡು ಕಂಬಳ) ಕಾಪು ಇಡುವ ಪದ್ಧತಿ ದುಗ್ಗಣ ಬೈದ್ಯರ ಕಾಲದಿಂದಲೂ ನಡೆದುಕೊಂಡು ಬಂದಿದೆ.
ತಳಿರುತೋರಣ, ಹೂವುಗಳಿಂದ ಅಲಂಕೃತವಾದ ಕಾಪು ಇಡುವ ಪದ್ದತಿ ಪರಂಪರೆಯಿಂದ ನಡೆದುಕೊಂಡು ಬಂದಿದೆ. ಮಾವಿನ ಎಲೆ, ಕಾವೇರಿ ಮರದೆಲೆ, ದಾಸವಾಳ ಹೂವು, ರಥ ಪುಷ್ಪ, ತೆಂಗಿನ ಗರಿ ಹೀಗೆ ಐದು ಬಗೆಯ ಎಲೆ ಚಿಗುರನ್ನು ಕೋಲುಗಳಿಂದ ಕಟ್ಟಿದ ಅಟ್ಟೆಗೆ ರಥ ಹೋಲುವಂತೆ ಅಲಂಕರಿಸಿ ಕಂಬಳ ಗದ್ದೆಯ ಮಂಜೊಟ್ಟಿಯಲ್ಲಿ ಇರಿಸುತ್ತಾರೆ.
ನೇಜಿ ನೆಟ್ಟು ಮುಗಿಯುತ್ತಿದ್ದಂತೆಯೇ ಮನೆ ಯಜಮಾನ ತಲೆಗೆ ಕಾಪುವನ್ನು ಹೊತ್ತು ಕಂಬಳಗದ್ದೆಯ ಮಧ್ಯಭಾಗಕ್ಕೆ ತಂದು ನೆಡುತ್ತಾರೆ. ದುಷ್ಟ ಶಕ್ತಿಗಳ, ಪ್ರಾಣಿ- ಪಕ್ಷಿ, ಜಂತುಗಳ ಹಾವಳಿ ಬಾರದಿರಲಿ ಎಂಬ ದೈವಶಕ್ತಿಗಳನ್ನು ಸಂಕಲ್ಪಿಸಿ ಕಾವಲು ಸಂಕೇತವಾಗಿ ಕಾಪುವನ್ನು ಇಡುತ್ತಾರೆ.
ಈ ಸಂದರ್ಭ ಕೃಷಿ ಕಾಯಕ ಮಹಿಳೆಯರು ಪಾಡ್ದನ ಹಾಡುತ್ತಾರೆ. ಜಾನಪದ ಕಲಾವಿದೆ ಭವಾನಿ ಪೆರಾರ ಅವರು 58 ವರ್ಷಗಳಿಂದ ಕಬೆತ್ತಿಗುತ್ತಿನ ನಾಟಿ ಕಾರ್ಯದಲ್ಲಿ ಪಾಲ್ಗೊಂಡು ಪಾಡ್ದನ ಸಹಿತ ಕೃಷಿ ಗೀತೆ ಹಾಡುತ್ತಿದ್ದು, ಇವರೊಂದಿಗೆ ಇತರ ಮಹಿಳೆಯರೂ ದನಿಗೂಡಿಸುತ್ತಾರೆ.
ಗದ್ದೆಗೆ ಕಾಪು ಇಡುವ ದಿನ ಮನೆ ಯಜಮಾನ ಉಪವಾಸ ಇರುತ್ತಾರೆ. ಆ ದಿನ ಊಟಕ್ಕೆ ಹಲಸಿನ ಪದಾರ್ಥವೇ ಪ್ರಧಾನ ಪದಾರ್ಥ ವಾಗಿರುತ್ತದೆ. ಇಂತಹ ನಾನಾ ಕೃಷಿ ಪದ್ಧತಿಗಳು ಮುಂದೆಯೂ ನಡೆಯುತ್ತಾ ಬರಬೇಕು ಎಂದು ಕಬೆತ್ತಿಗುತ್ತು ಮನೆತನದ ಈಗಿನ ಯಜಮಾನ ಮೋಹನ ಪೂಜಾರಿ ಹೇಳಿದರು.
ವಿಶೇಷ ವರದಿ: ರಾಕೇಶ್ ಎಕ್ಕಾರು
PublicNext
14/07/2022 02:38 pm