ತುಮಕೂರು: ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ.
ಗುಬ್ಬಿ ತಾಲೂಕಿನ ಸಂಪಿಗೆ ಮೂಲದ ಚೈತ್ರಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಚಿಕ್ಕನಾಯಕನಹಳ್ಳಿಯ ದೀಲಿಪ್ ಎಂಬಾತನನ್ನು 9 ವರ್ಷಗಳ ಹಿಂದೆ ಚೈತ್ರಾ ಮದುವೆಯಾಗಿದ್ದು, ಈ ದಂಪತಿಗೆ 7 ವರ್ಷದ ಮಗಳಿದ್ದಾಳೆ. ಗಂಡ-ಹೆಂಡತಿಯ ಮಧ್ಯೆ ಆಗಾಗ ಜಗಳವಾಗುತ್ತಿದ್ದು, ಈ ಬಗ್ಗೆ ದೀಲಿಪ್ ಕುಟುಂಬಸ್ಥರ ಜೊತೆ ಇತ್ತೀಚೆಗೆ ಮಾತನಾಡಿದ್ದ ಚೈತ್ರಾ ಕುಟುಂಬಸ್ಥರು ರಾಜಿ ಮಾಡಿಸಿದ್ದರು. ಆದಾಗ್ಯೂ ಎರಡು ದಿನಗಳ ಹಿಂದೆ ದಂಪತಿ ಮಧ್ಯೆ ಮತ್ತೆ ಜಗಳವಾಗಿದೆ. ಇದರಿಂದ ತೀವ್ರವಾಗಿ ನೊಂದ ಚೈತ್ರಾ, ಪತಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಸಂಬಂಧ ಚೈತ್ರಾ ಕುಟುಂಬಸ್ಥರು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 'ಗಂಡನ ಮನೆಯವರು ತಮ್ಮ ಮಗಳಿಗೆ ಮಾನಸಿಕ ಕಿರುಕುಳ ಕೊಟ್ಟು ಕೊಲೆ ಮಾಡಿದ್ದಾರೆ' ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಚೈತ್ರಾಳ ಪತಿ ದೀಲಿಪ್ ಹಾಗೂ ಅತ್ತೆ ಗಾಯತ್ರಮ್ಮ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
PublicNext
27/04/2022 07:40 am