ಬೆಂಗಳೂರು: ಮನದ ನೋವನ್ನು ಪತ್ರದಲ್ಲಿ ಉಲ್ಲೇಖಿಸಿದ ರಾಯಿಟರ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ವೈಟ್ ಫೀಲ್ಡ್ ನ ನಲ್ಲೂರಹಳ್ಳಿ ರಸ್ತೆಯ ಮೈಪೇರ್ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.ಶ್ರುತಿ (35) ಮೃತ ಪತ್ರಕರ್ತೆ. 5 ದಿನಗಳ ಹಿಂದೆ ಫ್ಲ್ಯಾಟ್ ನಲ್ಲಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಗಳವಾರ ಆಕೆಯ ಮನೆಗೆ ಮೃತಳ ಸೋದರ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ 3 ಡೆತ್ ನೋಟ್ ಪತ್ತೆಯಾಗಿದೆ.
ಶ್ರುತಿ ಸಾವಿಗೆ ಆಕೆಯ ಪತಿ ಅನೀಶ್ ಕೊಯಾಡನ್ ಕಾರಣ ಎಂದು ಮೃತಳ ಸಹೋದರ ನಿಶಾಂತ್ ನಾರಾಯಣ್ ದೂರು ನೀಡಿದ್ದಾರೆ. ‘ತನ್ನ ತಂಗಿಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಅನೀಶ್, ಮನೆಯಲ್ಲಿ ಹಿಡನ್ ಕ್ಯಾಮೆರಾ ಇಟ್ಟು ಆಕೆಯ ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದ. ಆಕೆ ಮಾತನಾಡುತ್ತಿದುದ್ದನ್ನೆಲ್ಲಾ ರೆಕಾರ್ಡ್ ಮಾಡುತ್ತಿದ್ದ. ವಾರಾಂತ್ಯದಲ್ಲಿ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ ಹಿಂಸಿಸುತ್ತಿದ್ದ. ಈ ವರ್ಷದ ಜನವರಿ 15ರಂದು ಹೆಂಡತಿ ಜೊತೆ ಜಗಳ ಮಾಡಿ ಕೊಲೆಗೆ ಯತ್ನಿಸಿದ್ದ. ಆಕೆಯ ಚೀರಾಟ ಕೇಳಿ ಓಡಿ ಬಂದಿದ್ದ ಭದ್ರತಾ ಸಿಬ್ಬಂದಿ ಪ್ರಾಣ ಉಳಿಸಿದ್ದರು ಎಂಬುದಾಗಿಯೂ ದೂರಿನಲ್ಲಿ ವಿವರಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
'ನನ್ನ ಸಾವಿಗೆ ನಾನೇ ಕಾರಣ. ನನ್ನ ಸಾವಿನಿಂದ ಹೆಚ್ಚು ಕೊರಗಬೇಡಿ. ಆದಷ್ಟು ಬೇಗ ನೋವಿನಿಂದ ಹೊರಬಂದು ನೆಮ್ಮದಿಯಿಂದ ಜೀವನ ಸಾಗಿಸಿ' ಎಂದು ಪಾಲಕರಿಗೆ ಶ್ರುತಿ ಮನವಿ ಮಾಡಿದ್ದಾರೆ. ಮತ್ತೊಂದು ಪತ್ರದಲ್ಲಿ 'ಮದುವೆಯಾದ ದಿನದಿಂದ ನನಗೆ ಹಿಂಸೆ ಕೊಟ್ಟಿದ್ದೀಯಾ. ನಾನು ಸಾವನ್ನಪ್ಪಿದ ಬಳಿಕ ನೀನು ಬೇರೊಂದು ವಿವಾಹವಾಗಿ ಆಕೆಗೂ ನನಗೆ ಕೊಟ್ಟಂತೆ ಕಾಟ ಕೊಡಬೇಡ' ಎಂದು ಪತಿಗೆ ಶ್ರುತಿ ಹೇಳಿದ್ದಾರೆ ಎನ್ನಲಾಗಿದೆ.
ಪತ್ನಿಯ ಸಾವಿನ ಸುದ್ದಿ ಕೇಳಿ ಅನೀಶ್ ನಾಪತ್ತೆಯಾಗಿದ್ದಾನೆ.
PublicNext
26/03/2022 09:25 am