ದಾವಣಗೆರೆ: ಕಾಟನ್ ಮಿಲ್ ಪ್ರದೇಶ ವೀಕ್ಷಣೆಗೆ ಬಂದಿದ್ದ ಮೇಯರ್ ಮುಂದೆಯೇ ಸ್ಥಳೀಯರು ಹೊಡೆದಾಡಿಕೊಂಡ ಘಟನೆ ನಡೆದಿದೆ.
ಮೂಲಸೌಕರ್ಯಗಳ ವೀಕ್ಷಣೆಗೆ ಬಂದಿದ್ದ ಮೇಯರ್ ಎಸ್. ಟಿ. ವೀರೇಶ್ ಅವರ ಮುಂದೆಯೇ ಸ್ಥಳೀಯರು ವಿನಾಕಾರಣ ಹೊಡೆದಾಡಿಕೊಂಡ ಘಟನೆ ದಾವಣಗೆರೆಯ 31ನೇ ವಾರ್ಡ್ ನ ಕಾಟನ್ ಮಿಲ್ ಪ್ರದೇಶದಲ್ಲಿ ನಡೆದಿದೆ.
ನಮ್ಮ ಪ್ರದೇಶ ಅಭಿವೃದ್ಧಿಯಾಗಿಲ್ಲ ಎಂದು ದಾವಣಗೆರೆ ಪಾಲಿಕೆ ಮೇಯರ್ ಎಸ್ ಟಿ ವೀರೇಶ್ ಬಳಿ ವಾರ್ಡ್ ಸದಸ್ಯ ಪಾಮೇನಹಳ್ಳಿ ನಾಗರಾಜ್ ಮನವಿಯನ್ನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮೇಯರ್ ವೀರೇಶ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಮಳೆಗಾಲದಲ್ಲಿ ತೀವ್ರ ತೊಂದರೆಯಾಗುತ್ತಿದ್ದು, ಇದಕ್ಕೆ ಡೆಕ್ ಸ್ಲಾಬ್ ಗಳನ್ನ ನಿರ್ಮಿಸಬೇಕು. ಅದಕ್ಕಾಗಿ ಇಲ್ಲಿನ ಶೆಡ್ ಗಳನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ಮೇಯರ್ ಗೆ ಒತ್ತಾಯಿಸಿದರು.
ಆದರೆ, ಶೆಡ್ ನಿರ್ಮಿಸಿಕೊಂಡಿದ್ದ ವ್ಯಕ್ತಿಯೊಬ್ಬ ನಾನು ಶೆಡ್ ತೆರವು ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ. ಆಗ ಕೆಲವು ಆತನ ವಿರುದ್ಧ ಕೂಗಾಡಿದ್ದು, ಇದರಿಂದ ಸಿಟ್ಟಿಗೆದ್ದ ಆ ವ್ಯಕ್ತಿ ಜಗಳ ತೆಗೆದಿದ್ದಾನೆ. ಅಲ್ಲದೇ, ಮೇಯರ್ ಮುಂದೆಯೇ ಇಬ್ಬರು ವ್ಯಕ್ತಿಗಳು ಕೈ ಕೈ ಮಿಲಾಯಿಸುವ ಮೂಲಕ ಹೊಡೆದಾಡಿಕೊಂಡಿದ್ದಾರೆ. ಬಳಿಕ, ಮೇಯರ್ ವೀರೇಶ್ ಹಾಗೂ ಪಾಲಿಕೆ ಸದಸ್ಯ ನಾಗರಾಜ್ ಅವರು ಜಗಳ ಬಿಡಿಸಿದ್ದು, ಜಗಳ ತೆಗೆದ ವ್ಯಕ್ತಿಯನ್ನ ಸ್ಥಳದಿಂದ ಜಾಗ ಖಾಲಿ ಮಾಡಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
PublicNext
19/10/2021 11:49 am