ಬೆಂಗಳೂರು: ಶಾಲೆಗೆ ಮಕ್ಕಳ ದಾಖಲಾತಿಗೆ ಬಂದ ಮಕ್ಕಳ ಪೋಷಕಿಯೊಬ್ಬರ ಜೊತೆ ಮುಖ್ಯ ಶಿಕ್ಷಕನೋರ್ವ ಅನುಚಿತವಾಗಿ ವರ್ತಿಸಿದ ಘಟನೆ ಬಿಬಿಎಂಪಿ ವ್ಯಾಪ್ತಿಯ ಕೋದಂಡರಾಮಪುರ ಶಾಲೆಯಲ್ಲಿ ನಡೆದಿದೆ.
ಶಾಲೆಯ ಮುಖ್ಯ ಶಿಕ್ಷಕ ಲೋಕೇಶಪ್ಪ ವಿದ್ಯಾರ್ಥಿಯನ್ನು ಶಾಲೆಗೆ ಸೇರಿಸಲು ಬಂದ ಪೋಷಕಿಯಿಂದ ಶಾಲೆಯಲ್ಲಿಯೇ ಬಾಡಿ ಮಸಾಜ್ ಮಾಡಿಸಿಕೊಂಡಿದ್ದಾನೆ. ಶಾಲೆಗೆ ಮಗುವನ್ನು ದಾಖಲಿಸಲು ಬಂದ ಪೋಷಕ ಮಹಿಳೆಯಿಂದ ಒತ್ತಾಯ ಪೂರ್ವಕವಾಗಿ ಈತ ಈ ಕೃತ್ಯ ನಡೆಸಿದ್ದಾನೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ ಶಿಕ್ಷಣಾಧಿಕಾರಿಗಳು ಆತನನ್ನು ಅಮಾನತು ಮಾಡಿ ಆದೇಶ ನೀಡಿದೆ.
ಮಗುವನ್ನು ಶಾಲೆಗೆ ದಾಖಲಿಸಲು ಬಂದ ಮಹಿಳೆಯಲ್ಲಿ ಆಕೆಯ ವೃತ್ತಿಯ ಬಗ್ಗೆ ಲೋಕೇಶಪ್ಪ ವಿಚಾರಿಸಿದ್ದ. ಬ್ಯೂಟಿ ಪಾರ್ಲರ್ ನಡೆಸುತ್ತಿರುವುದಾಗಿ ಆ ಮಹಿಳೆ ತಿಳಿಸಿದ್ದರು. ಆಗ ಮುಖ್ಯಶಿಕ್ಷಕ ಆ ಮಹಿಳೆಯ ಬಳಿ ಮಸಾಜ್ ಮಾಡುವಂತೆ ಒತ್ತಾಯಿಸಿದ್ದರು. ಮಗುವಿನ ಶಿಕ್ಷಣಕ್ಕೆ ತೊಡಕಾಗಬಾರದು ಎಂಬ ಕಾರಣಕ್ಕೆ ಆ ಮಹಿಳೆ ಒಲ್ಲದ ಮನಸ್ಸಿನಿಂದಲೇ ಇದಕ್ಕೆ ಒಪ್ಪಿದ್ದರು. ತರಗತಿ ಕೊಠಡಿಯೊಂದಕ್ಕೆ ಮಹಿಳೆಯನ್ನು ಕರೆದೊಯ್ದ ಮಸಾಜ್ ಮಾಡಿಸಿಕೊಂಡ ಲೋಕೇಶಪ್ಪ ಈ ವೇಳೆ ಆಕೆಯ ಜೊತೆ ಅಶ್ಲೀಲವಾಗಿಯೂ ಮಾತನಾಡಿದ್ದರು ಎಂದು ಗೊತ್ತಾಗಿದೆ.
ಲೋಕೇಶಪ್ಪ ಮಸಾಜ್ ಮಾಡಿಸಿಕೊಳ್ಳುತ್ತಿರುವ ದೃಶ್ಯವನ್ನು ಶಾಲೆಯ ಶಿಕ್ಷಕರೊಬ್ಬರು ಸೆರೆ ಹಿಡಿದಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಬಿಬಿಎಂಪಿ ಶಿಕ್ಷಣ ವಿಭಾಗದ ಅಧಿಕಾರಿಗಳು ವಿಚಾರಿಸಿದಾಗ ಲೋಕೇಶಪ್ಪ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ.
‘ಪ್ರೌಢಶಾಲೆಯ ಕಟ್ಟಡವನ್ನು ಖಾಸಗಿ ಕೆಲಸಕ್ಕೆ ಬಳಸಿಕೊಳ್ಳುವ ಮೂಲಕ ಲೋಕೇಶಪ್ಪ ಸರ್ಕಾರಿ ಕೆಲಸದ ಸಮಯದಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆ. ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅನ್ವಯ ಅವರನ್ನು ಸೇವೆಯಿಂದ ಅಮಾನತುಪಡಿಸಲಾಗಿದೆ. ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಯಲಿದೆ’ ಎಂದು ಬಿಬಿಎಂಪಿ ತಿಳಿಸಿದೆ.
PublicNext
23/09/2021 09:13 am