ಮೈಸೂರು: ಸ್ನೇಹಿತನನ್ನು ಪಾರ್ಟಿಗಾಗಿ ಕರೆಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ, ಬಳಿಕ ಆತನ ಶವವನ್ನು ಹೂತಿಟ್ಟಿದ್ದ ನಾಲ್ವರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಟಿ.ಕೆ. ಬಡಾವಣೆಯ ನಿವಾಸಿ ನಾಗರತ್ನ ಎಂಬುವರ ಮಗ ಉಮೇಶ್ (24) ಕೊಲೆಯಾದ ಯುವಕ. ಆತನ ಸ್ನೇಹಿತರಾದ ಪೃಥ್ವಿರಾಜ್ (23), ವಸಂತ(24), ಮಂಜೇಶ್(23) ಹಾಗೂ ಮಾನಸ ಗಂಗೋತ್ರಿ ನಿವಾಸಿ (24) ಬಂಧಿತರು.
ಹಣಕಾಸು ವಿಚಾರವಾಗಿ ಉಮೇಶ್ ಹಾಗೂ ಆರೋಪಿಗಳ ನಡುವೆ ಜಗಳವಾಗಿತ್ತು. ಆಗಸ್ಟ್ 25ರ ರಾತ್ರಿ ಆರೋಪಿಗಳು ತಾವು ಪಾರ್ಟಿ ಮಾಡುವ ಮಾಮೂಲಿ ಜಾಗವಾದ ಬೋಗಾದಿ ರಸ್ತೆಯ ಪೆಟ್ರೋಲ್ ಬಂಕ್ ಹಿಂಭಾಗದ ಖಾಲಿ ಜಾಗಕ್ಕೆ ಉಮೇಶ್ನನ್ನು ಆಹ್ವಾನಿಸಿದ್ದಾರೆ. ಆಗ ಹಣಕಾಸಿನ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದ್ದು, ಮಾರಕಾಸ್ತ್ರಗಳಿಂದ ಉಮೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಬಳಿಕ ಅಲ್ಲಿಯೇ ಪೊದೆಯ ಬಳಿ ಹೊಂಡ ತೋಡಿ ಶವವನ್ನು ಹೂತು ಹಾಕಿ ತೆರಳಿದ್ದರು ಎಂಬ ಸತ್ಯ ವಿಚಾರಣೆ ವೇಳೆ ಹೊರ ಬಿದ್ದಿದೆ.
ಹೂತಿಟ್ಟ ಶವವನ್ನು ಹೊರತೆಗೆದು ಪೊಲೀಸರು ಮಹಜರು ಮಾಡಿದ್ದಾರೆ. ಈ ಸಂಬಂಧ ಸರಸ್ವತಿ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
02/09/2021 08:20 pm