ಮುಂಬೈ: ಅಮಿತಾಭ್ ಬಚ್ಚನ್ ಮನೆ ಹಾಗೂ ಮುಂಬೈನ 3 ರೈಲ್ವೇ ನಿಲ್ದಾಣಗಳಲ್ಲಿ ಬಾಂಬ್ ಇರಿಸಿರುವುದಾಗಿ ಅನಾಮಿಕ ಕರೆವೊಂದು ಪೊಲೀಸರನ್ನು ಕಂಗಾಲಾಗಿಸಿರುವ ಘಟನೆ ಮುಂಬೈ ನಲ್ಲಿ ನಡೆದಿದೆ. ಮುಂಬೈ ಪೊಲೀಸರಿಗೆ ನಿನ್ನೆ (ಆಗಸ್ಟ್ 06, ಶುಕ್ರವಾರ) ರಾತ್ರಿ
ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಮಾತನಾಡಿದ ಅನಾಮಿಕ ವ್ಯಕ್ತಿ ಈ ರೀತಿಯ ಬೆದರಿಕೆಯೊಡ್ಡಿದ್ದು, ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್ ಮನೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಬೈಕುಲಾ, ದಾದರ್ ರೈಲ್ವೇ ನಿಲ್ದಾಣಗಳಲ್ಲಿ ಸ್ಫೋಟಕ ಇರಿಸಿರುವುದಾಗಿ ಹೇಳಿದ್ದಾನೆ.
ತಕ್ಷಣ ಎಚ್ಚೆತ್ತ ಮುಂಬೈ ಪೊಲೀಸರು ಹುಡುಕಾಟ ನಡೆಸಿದರಾದರೂ ಯಾವುದೇ ಸ್ಫೋಟಕ, ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಯಾವ ಸ್ಥಳಗಳಲ್ಲೂ ಅನುಮಾನಸ್ಪದ ವಸ್ತು ಅಥವಾ ಸ್ಫೋಟಕ ಇಟ್ಟ ಕುರುಹು ಕಂಡುಬಂದಿಲ್ಲವಾದರೂ ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕರೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
PublicNext
07/08/2021 10:35 am