ಹೈದರಾಬಾದ್: ಫೇಸ್‌ಬುಕ್‌ನಿಂದ ಪರಿಚಯವಾದ ತೃತೀಯಲಿಂಗಿ ಕೈ ಹಿಡಿದು ಸುದ್ದಿಯಾಗಿದ್ದ ಯುವಕ ಈಗ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿರುವ ಆರೋಪ ಎದುರಿಸುತ್ತಿದ್ದಾನೆ. ಈ ಪ್ರಕರಣ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಆಂಧ್ರ ಪ್ರದೇಶದ ಏಳೂರು ಮೂಲದ ತಾರಕ ಅಲಿಯಾಸ್ ಪಾಂಡು ಹಾಗೂ ಭೂಮಿ ದಂಪತಿಯ ಕಥೆ ಇದು. ಫೇಸ್ಬುಕ್ನಲ್ಲಿ ಪಾಂಡುಗೆ ಭೂಮಿ ಪರಿಚಯವಾಗಿತ್ತು. ಕೆಲ ದಿನಗಳ ಬಳಿಕ ಇದು ಗಾಢ ಪ್ರೀತಿಗೆ ತಿರುಗಿತ್ತು. ಈ ಮಧ್ಯೆ ಭೂಮಿ ಯುವತಿಯೇ ಅಲ್ಲ. ಆಕೆ ತೃತೀಯ ಲಿಂಗಿ ಎಂಬುದು ಪಾಂಡುಗೆ ತಿಳಿಯುತ್ತದೆ. ಆದರೂ ಪಾಂಡು ತನ್ನ ಪ್ರೀತಿಯನ್ನು ಮುಂದುವರಿಸುತ್ತಾನೆ. ಮದುವೆಗೂ ಒಪ್ಪಿಗೆ ನೀಡುತ್ತಾನೆ.
ಪಾಂಡು 2020ರ ಜನವರಿಯಲ್ಲಿ ಕುಟುಂಬಸ್ಥರ ಒಪ್ಪಿಗೆ ಪಡೆದು ಭೂಮಿಯ ಕೈ ಹಿಡಿಯುತ್ತಾನೆ. ಒಂದು ವರ್ಷ ಚೆನ್ನಾಗಿಯೇ ಸಂಸಾರ ನಡೆಸುತ್ತಾರೆ. ಆದರೆ ಇಬ್ಬರ ನಡುವೆ ಇದೀಗ ಏನು ನಡೆದಿದೆಯೋ ತಿಳಿದಿಲ್ಲ. ಪಾಂಡು ಆಕೆಯನ್ನು ಬೇಡ ಎಂದು ಪಟ್ಟು ಹಿಡಿದಿದ್ದಾನೆ ಎನ್ನಲಾಗಿದೆ. ಇತ್ತ ಭೂಮಿ ವರದಕ್ಷಿಣೆ ಆರೋಪ ಹೊರೆಸಿದ್ದಾಳೆ. ಈ ಸಂಬಂಧ ಹೈದರಾಬಾದ್ನ ಎಲ್ಬಿ ನಗರದ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
20/02/2021 09:45 pm