ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿಯ ವಿವಾದಿತ ಜಾಗದಲ್ಲಿ ಭಾನುವಾರ ಖಾದ್ರಿ ಗೋರಿಗೆ ಪೂಜೆ, ಹಾಗೂ ಸಾಮೂಹಿಕ ಭೋಜನಕ್ಕೆ ಸಕಲ ತಯಾರಿ ನಡೆದಿತ್ತು. ಈ ವೇಳೆ ಅಲ್ಲಿಗೆ ದಿಢೀರ್ ಭೇಟಿ ಕೊಟ್ಟ ಸಂಸದ ಪ್ರತಾಪ ಸಿಂಹ ಇಲ್ಲಿ ಯಾವುದೇ ಧಾರ್ಮಿಕ ಕಾರ್ಯ ನಡೆಸದಂತೆ ತಾಕೀತು ಮಾಡಿದರು. ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯ ಸಿಡಿಯಮ್ಮ ದೇವಾಲಯದ ಮುಂಭಾಗದ ಸರ್ವೆ ನಂ.24ರಲ್ಲಿ 8.2 ಗುಂಟೆ ಜಮೀನನ್ನು 1964ರ ಮಂಜೂರಾತಿಯಂತೆ ಕಂದಾಯ ಇಲಾಖೆ 2018ರಲ್ಲಿ ವಕ್ಫ್ ಬೋರ್ಡ್‌ಗೆ ಖಾತೆ ಮಾಡಿತ್ತು.
ಆದರೆ ಈ ಜಮೀನು ತಮ್ಮದೆಂದು ಸಿಡಿಯಮ್ಮ ದೇವಾಲಯ ಸಮಿತಿಯವರು ಗ್ರಾಮಸ್ಥರೊಡಗೂಡಿ ಹೋರಾಟ ನಡೆಸಿ ಖಾತೆ ರದ್ದುಗೊಳಿಸುವಂತೆ ಮನವಿ ಸಲ್ಲಿಸಿದ್ದರು. ಗ್ರಾಮಸ್ಥರ ಮನವಿಯಂತೆ ಖಾತೆ ಮಾಡಿದ್ದವರೇ ಹಿರಿಯ ಅಧಿಕಾರಿಗಳಿಗೆ ಖಾತೆ ರದ್ದುಗೊಳಿಸುವಂತೆ ವರದಿ ನೀಡಿದ್ದರು. ಅಂದಿನಿಂದ ವಿವಾದಿತ ನಿವೇಶನದಲ್ಲಿ ಯಾವುದೇ ಕಾರ್ಯ ನಡೆಸದೆ ಯಥಾಸ್ಥಿತಿ ಕಾಯ್ದುಕೊಳ್ಳಲು ನ್ಯಾಯಾಲಯ ಸೂಚಿಸಿತ್ತು.
ಇದೀಗ ದಿಢೀರ್ ಆಗಿ ವಿವಾದಿತ ಸ್ಥಳದಲ್ಲಿದ್ದ ಖಾದ್ರಿಯವರ ಗೋರಿಗೆ ಸುಣ್ಣಬಣ್ಣ ಬಳಿದು, ಪೂಜೆ ಸಲ್ಲಿಸಿದ ಕೆಲವರು, ಶಾಮಿಯಾನ ಹಾಕಿ, ಸಾಮೂಹಿಕ ಭೋಜನಕ್ಕಾಗಿ ಅಡುಗೆ ತಯಾರಿಯಲ್ಲಿದ್ದರು. ಈ ವೇಳೆ ಸ್ಥಳೀಯ ಮುಖಂಡರು ಕಟ್ಟೆಮಳಲವಾಡಿ ಮಾರ್ಗದಲ್ಲಿ ತೆರಳುತ್ತಿದ್ದ ಸಂಸದರಿಗೆ ಮಾಹಿತಿ ನೀಡಿದರು.
ತಕ್ಷಣ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿದ ಸಂಸದ ಪ್ರತಾಪಸಿಂಹ, ಅಡುಗೆ ತಯಾರಿಯಲ್ಲಿದ್ದವರನ್ನು ತರಾಟೆಗೆ ತೆಗೆದುಕೊಂಡರು. ಈ ನಿವೇಶನದ ವಿವಾದವು ನ್ಯಾಯಾಲಯದಲ್ಲಿದ್ದು, ಯಾವುದೇ ಕಾರ್ಯ ನಡೆಸುವಂತಿಲ್ಲ. ಒಂದು ವೇಳೆ ನಡೆಸಿದರೆ ಅದು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು. ನಂತರ ಸಂಘಟಕರು ಅಡುಗೆ ತಯಾರಿಯನ್ನು ಸ್ಥಗಿತಗೊಳಿಸಿ ಶಾಮಿಯಾನ ತೆರವುಗೊಳಿಸಿದರು.
PublicNext
19/01/2021 07:51 am