ಬೆಂಗಳೂರು: ಜಮ್ಮು- ಕಾಶ್ಮೀರದಲ್ಲಿ ಸೈನಿಕರು ಮತ್ತು ನಾಗರಿಕರ ಮೇಲೆ ದಾಳಿ ನಡೆಸಿ ಎಸ್ಕೇಪ್ ಆಗಿದ್ದ ಉಗ್ರ ತಾಲೀಬ್ ಹುಸೇನ್ ಸೀದಾ ರೈಲಿನಲ್ಲಿ ಮೆಜೆಸ್ಟಿಕ್ ಗೆ ಬಂದಿಳಿದು ಅನಾಥ ಅಂತ ಹೇಳಿಕೊಂಡು ಅಲ್ಲೇ ಕೆಲಸ ಮಾಡಿಕೊಂಡಿದ್ದ. ಲಾರಿಗಳಿಗೆ ಲೋಡ್- ಅನ್ ಲೋಡ್ ಕೆಲಸ ಮಾಡಿಕೊಂಡಿದ್ದ!
ಮಸೀದಿಯಲ್ಲೇ ಉಳಕೊಂಡು ತನ್ನ ಪಾಡಿಗೆ ತಾನು ಸಿಲಿಕಾನ್ ಸಿಟಿಯಲ್ಲಿ ನೆಲೆಸಿದ್ದ. ಸ್ಥಳೀಯರಿಗೆ ಅನುಮಾನ ಬಾರದ ರೀತಿ ತಾನೊಬ್ಬ ಅಮಾಯಕ ಅನ್ನೋ ರೀತಿ ಬಿಂಬಿಸುತ್ತಾ ಎಲ್ಲರ ಮೆಚ್ಚುಗೆ ಗಳಿಸಿದ್ದ. ಜಮ್ಮು- ಕಾಶ್ಮೀರ ಪೊಲೀಸರು ಉಗ್ರ ತಾಲೀಬನ ಕುತಂತ್ರ ಪತ್ತೆ ಹಚ್ಚಿ, ಅಸಲಿ ಮುಖ ಬಯಲಿಗೆಳೆದಿದ್ದಾರೆ.
ತಾಲೀಬ್ ಹುಸೇನ್ ಶ್ರೀರಾಮಪುರದಲ್ಲಿ ಏಳೆಂಟು ವರ್ಷಗಳಿಂದ ನೆಲೆಸಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಮೇ 29 ರಂದು ಜಮ್ಮು- ಕಾಶ್ಮೀರ ಪೊಲೀಸರ ವಿಶೇಷ ತಂಡ ತಾಲೀಬ್ ನನ್ನು ಬಂಧಿಸಿ ಕರೆದೊಯ್ದಿದೆ. ಈತ ನಗರಕ್ಕೆ ಬಂದ ಬಳಿಕ ಮೊದಲು ರೈಲು ನಿಲ್ದಾಣದಲ್ಲಿ ಅಮಾಲಿ ಕೆಲಸ ಮಾಡ್ಕೊಂಡು ಜೀವನ ನಡೆಸ್ತಿದ್ದಾನಂತೆ.
ಓಕಳಿಪುರಂ ಬಳಿ ಬಾಡಿಗೆ ಮನೆ ಮಾಡಿದ್ದ ತಾಲೀಬ್, ತನ್ನ 2ನೇ ಪತ್ನಿ- ಮಕ್ಕಳೊಂದಿಗೆ ನೆಲೆಸಿದ್ದ. ಆದ್ರೆ, ಆಗ ಕೊರೊನಾ ಹಾವಳಿ ಶುರುವಾಗಿದ್ದು, ನಂತರ ಓಕಳಿಪುರಂ ನಿವಾಸಿಗಳು ಆತನಿಗೆ ಮಸೀದಿ ಹೊರಭಾಗದ ಚಿಕ್ಕ ಕೋಣೆಯಲ್ಲಿ ಉಳಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟಿದ್ರಂತೆ. ರೈಲ್ವೆ ಪಾರ್ಸೆಲ್ ಲೋಡಿಂಗ್- ಅನ್ ಲೋಡಿಂಗ್ ಜೊತೆಗೆ ಡ್ರೈವಿಂಗ್ ಕೆಲಸ ಮಾಡುತ್ತಾ ಜೀವನ ನಡೆಸ್ತಿದ್ದ.
ಏರಿಯಾದಲ್ಲಿ ತಾಲೀಬ್, ಒಳ್ಳೆಯ ವ್ಯಕ್ತಿ ಅಂತ ಹೆಸರು ಮಾಡಿದ್ದ. ಮೇ 29ರ ರಾತ್ರಿ 10.50ರ ಸುಮಾರಿಗೆ ಶ್ರೀರಾಮಪುರ ಪೊಲೀಸರು ಮಸೀದಿ ಬಳಿಗೆ ತೆರಳಿ, ಆಗಷ್ಟೇ ಕೆಲಸ ಮುಗಿಸಿ ಬಂದಿದ್ದ ತಾಲೀಬ್ ನನ್ನು ಬಂಧಿಸಿ, ಈ ವೇಳೆ ತಾಲೀಬ್, ಜಮ್ಮು- ಕಾಶ್ಮೀರದಲ್ಲಿ ಮೊದಲು ಮದುವೆಯಾಗಿದ್ದು, ಪತ್ನಿ- ಮಕ್ಕಳನ್ನು ಬಿಟ್ಟು ಬಂದಿದ್ದಾನೆ. ಈ ಬಗ್ಗೆ ಹೇಬಿಯಸ್ ಕಾರ್ಪಸ್ ದಾಖಲಾಗಿದ್ದು, ಆದ್ದರಿಂದ ಕರೆದೊಯ್ಯಲಾಗುತ್ತಿದೆ ಅಂತ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಆದರೆ, ತಾಲೀಬ್ ಹಿಂದೆ ಜಮ್ಮು- ಕಾಶ್ಮೀರದಲ್ಲಿ ಸೈನಿಕರು ಮತ್ತು ನಾಗರಿಕರ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಶಂಕಿತ ಉಗ್ರನ ಬಂಧನ ವಿಚಾರ ಗೊತ್ತಾಗಿದೆ. ಆತ ಎಲ್ಲಿ ನೆಲೆಸಿದ್ದ ಅನ್ನೋ ಮಾಹಿತಿ ಇಲ್ಲ, ತನಿಖೆ ನಡೆಸಲಾಗುವುದು ಎಂದಿದ್ದಾರೆ.
PublicNext
08/06/2022 06:09 pm