ನವದೆಹಲಿ: ಭಾರತದ ರಾಜಕಾರಣಿಗಳು ಮತ್ತು ಖ್ಯಾತ ಉದ್ಯಮಿಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಮುಂಬೈ ಸರಣಿ ಸ್ಫೋಟ ರೂವಾರಿ, ಭೂಗತ ಪಾತಕಿ ದಾವೂದ್ ಇಬ್ರಾಹಿ ಹೊಸ ತಂಡವೊಂದನ್ನು ರಚಿಸಿರುವ ವಿಚಾರವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಯಲು ಮಾಡಿದೆ.
ತನಿಖಾ ಸಂಸ್ಥೆ ಪ್ರಕಾರ, ಭಾರತದ ಹಲವು ರಾಜಕೀಯ ನಾಯಕರು ಮತ್ತು ಖ್ಯಾತ ಉದ್ಯಮಿಗಳ ಹೆಸರುಗಳು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಿಟ್ ಲಿಸ್ಟ್‌ನಲ್ಲಿವೆ. ದೇಶದಿಂದ ಪರಾರಿಯಾಗಿರುವ ದಾವೂದ್ ಇಬ್ರಾಹಿಂ ಹಾಗೂ ಆತನ ವಿಶೇಷ ತಂಡ ಭಾರತದ ವಿವಿಧೆಡೆ ಸ್ಫೋಟಕ ಮತ್ತು ಲೆಥಾಲ್ ಶಸ್ತ್ರಾಸ್ತ್ರ ಬಳಸಿ ಹಿಂಸಾಚಾರ ಭುಗಿಲೇಳುವಂತೆ ಮಾಡುವ ಸಂಚು ರೂಪಿಸಿರುವುದಾಗಿ ವರದಿ ವಿವರಿಸಿದೆ. ಇದಲ್ಲದೆ ದಾವೂದ್ ಇಬ್ರಾಹಿಂ ದೆಹಲಿ ಮತ್ತು ಮುಂಬೈ ಮೇಲೆ ತನ್ನ ಗಮನವನ್ನು ಕೇಂದ್ರಿಕರಿಸಿದ್ದಾನೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿರುವ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ವಿರುದ್ಧ ಇಡಿ ಇತ್ತೀಚೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು. ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್, ಆತನ ಸಹಾಯಕರು ಮತ್ತು ಗ್ಯಾಂಗ್ ಸದಸ್ಯರನ್ನು ಇಡಿ ವಿಚಾರಣೆ ನಡೆಸಲಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಕ್ಬಾಲ್ ಕಸ್ಕರ್‌ನನ್ನು ಫೆಬ್ರವರಿ 24 ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಲಾಗಿದೆ.
PublicNext
21/02/2022 12:04 pm