ಬೆಳಗಾವಿ: ಭರ್ಜರಿ ಕಾರ್ಯಾಚರಣೆ ನಡೆಸಿದ ಬೆಳಗಾವಿ ಜಿಲ್ಲಾ ಪೊಲೀಸರು ಹಲವು ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಕೋಟ್ಯಾಂತರ ಮೌಲ್ಯದ ವಸ್ತುಗಳನ್ನು ಮೂಲ ಮಾಲೀಕರಿಗೆ ನೀಡಿದ್ದಾರೆ.
ಕಳ್ಳತನವಾಗಿದ್ದ ಬರೋಬ್ಬರಿ 8 ಕೋಟಿ 58 ಲಕ್ಷ 23 ಸಾವಿರದ 999 ರೂ. ಮೌಲ್ಯದ ವಸ್ತುಗಳನ್ನು ಅವುಗಳ ಮೂಲ ಮಾಲೀಕರಿಗೆ ನೀಡಲಾಗಿದೆ. ಈ ಎಲ್ಲ ವಸ್ತುಗಳು 2020-2021ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಳ್ಳತನ ಆಗಿದ್ದವು. ಒಟ್ಟು 206 ಪ್ರಕರಣ ಪತ್ತೆ ಹಚ್ಚಿದ ಪೊಲೀಸರು 3 ಕೆಜಿ 38 ಗ್ರಾಂ ಚಿನ್ನಾಭರಣ ಹಾಗೂ 18 ಕೆಜಿ 156 ಗ್ರಾಂ ಬೆಳ್ಳಿ ಆಭರಣ ಮತ್ತು 1 ಕೋಟಿ 21 ಲಕ್ಷ 2 ಸಾವಿರದ 450 ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದರು.
ಜತೆಗೆ 168 ಬೈಕ್, 32 ವಾಹನ ಸೇರಿ ವಿವಿಧ ಉಪಕರಣಗಳನ್ನು ಕೂಡ ಜಪ್ತಿ ಮಾಡಿಕೊಳ್ಳಲಾಗಿತ್ತು. ಈ ಎಲ್ಲ ಪ್ರಕರಣಗಳಲ್ಲಿ 600ಕ್ಕೂ ಅಧಿಕ ಕಳ್ಳತನ ಆರೋಪಿಗಳನ್ನು ಬೆಳಗಾವಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರು ಜಪ್ತಿ ಮಾಡಲಾಗಿದ್ದ ಈ ಎಲ್ಲ ವಸ್ತುಗಳನ್ನು ಮೂಲ ಮಾಲೀಕರಿಗೆ ಹಾಗೂ ವಾರಸುದಾರರಿಗೆ ವಸ್ತುಗಳನ್ನು ಮರುಸಂದಾಯ ಮಾಡಿದ್ದಾರೆ. ಕಳ್ಳತನವಾದ ವಸ್ತುಗಳು ಮರಳಿ ಸಿಕ್ಕಿದ್ದಕ್ಕೆ ಜನರು ಸಂತಸಗೊಂಡು ಬೆಳಗಾವಿ ಪೊಲೀಸರಿಗೆ ಥ್ಯಾಂಕ್ಸ್ ಹೇಳಿದ್ದಾರೆ.
PublicNext
09/11/2021 03:12 pm