ಬೆಳಗಾವಿ: ನಗರದ ಆರ್‌ಪಿಡಿ ವೃತ್ತದ ಬಳಿ ಅನಧಿಕೃತವಾಗಿ ವೀರ ಮದಕರಿ ನಾಯಕ ವೃತ್ತ ಎಂದು ನಾಮಕರಣ ಮಾಡಿದ್ದ ಫಲಕವನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯುವಕರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಆರ್‌ಪಿಡಿ ಕಾಲೇಜು ಸರ್ಕಲ್ ಬಳಿ ಕೆಲ ವಾಲ್ಮೀಕಿ ಸಮುದಾಯದ ಯುವಕರು ಮಂಗಳವಾರ ಬೆಳ್ಳಂಬೆಳಿಗ್ಗೆ ಕನ್ನಡ, ಮರಾಠಿ ಮತ್ತು ಆಂಗ್ಲ ಭಾಷೆಯಲ್ಲಿ ಬರೆದಿರುವ ಶ್ರೀ ರಾಜವೀರ ಮದಕರಿ ನಾಯಕ ವೃತ್ತ ಎಂದು ನಾಮಕರಣ ಮಾಡಿರುವ ನಾಮಫಲಕ ಅಳವಡಿಸಿದರು. ಇದಾದ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅನಧಿಕೃತವಾಗಿ ಹಾಕಿದ್ದ ನಾಮಫಲಕವನ್ನು ತೆರವುಗೊಳಿಸಿದರು. ಈ ವೇಳೆ ಅನುಮತಿ ಪಡೆದು ನಾಮಫಲಕ ಹಾಕುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಪೊಲೀಸರು ನಾಮಪಲಕ ತೆರವು ಮಾಡಿದ್ದರಿಂದ ವಾಲ್ಮೀಕಿ ಸಮುದಾಯದ ಯುವಕರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದು, ಸ್ಥಳದಲ್ಲಿ ಕೆಎಸ್‌ಆರ್‌ಸಿಪಿ ತುಕಡಿ, ಸಿಆರ್ ಸೇರಿದಂತೆ ಓರ್ವ ಎಸಿಪಿ, ಇಬ್ಬರು ಪಿಐ, ನಾಲ್ವರು ಪಿಎಸ್ಐಗಳು ಸೇರಿದಂತೆ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
PublicNext
07/09/2021 11:32 am