ನವದೆಹಲಿ: ನೂಪುರ ಶರ್ಮಾ ಪರ ಪೋಸ್ಟ ಹಾಕಿದ್ದ ಟೈಲರ್‌ನನ್ನು ಅತ್ಯಂತ ಅಮಾನುಷವಾಗಿ ಕೊಲೆ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖಾಧಿಕಾರಿಗಳನ್ನು ರಾಜಸ್ಥಾನದ ಉದಯಪುರಕ್ಕೆ ರವಾನಿಸದೆ. ಕೊಲೆಯಾದ ಸ್ಥಳದಲ್ಲಿ ಬೀಡು ಬಿಟ್ಟಿರುವ ತನಿಖಾಧಿಕಾರಿಗಳು ಸಮಗ್ರ ತನಿಖೆ ಆರಂಭಿಸಿದ್ದಾರೆ.
ಕಟ್ಟುನಿಟ್ಟಾದ ಭಯೋತ್ಪಾದನಾ ವಿರೋಧಿ ಕಾನೂನು ಹಾಗೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ ನಂತರ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವ ಸಾಧ್ಯತೆಯಿದೆ.
ಮೇಲ್ನೋಟಕ್ಕೆ ಇದು ಭಯೋತ್ಪಾದಕ ದಾಳಿಯಂತೆ ತೋರುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಇಬ್ಬರು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಈ ಸಂಪೂರ್ಣ ದಾಳಿಯ ವಿಡಿಯೋ ಕೂಡ ಮಾಡಲಾಗಿದೆ. ಅಷ್ಟೇ ಅಲ್ಲ, ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಆರೋಪಿಗಳು ಕೊಲೆಯ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ. ಸದ್ಯ ಉದಯಪುರ ನಗರದ ಏಳು ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪೊಲೀಸರು ನಗರದಾದ್ಯಂತ ಹೈ ಅಲರ್ಟ್ ಆಗಿದ್ದಾರೆ.
PublicNext
29/06/2022 08:15 am