ಬೆಂಗಳೂರು: ಕೋವಿಡ್ ಮಹಾಮಾರಿಯಿಂದ ಅಮ್ಮನನ್ನು ಕಳೆದುಕೊಂಡಿದ್ದ ಕೊಡಗಿನ ಬಾಲಕಿ, ಅಮ್ಮನ ನೆನಪಿನ ಆಸರೆಯಾಗಿದ್ದ ಮೊಬೈಲ್ ಕೂಡ ಈ ವೇಳೆ ಕಳೆದುಕೊಂಡು ಇನ್ನಷ್ಟು ದುಃಖಿತಳಾಗಿದ್ದಳು. ಈ ಮೊಬೈಲ್ಗಾಗಿ ಹುಡುಕಾಟ ನಡೆಸಿದ್ದ ಬಾಲಕಿಗೆ ಮೂರು ತಿಂಗಳ ಬಳಿಕ ಅಮ್ಮನ ನೆನಪಿರುವ ಫೋನ್ ಅನ್ನು ಮರಳಿ ಪಡೆದಿದ್ದಾಳೆ. ಫೋನ್ ಮೂಲಕ ಅಮ್ಮನ ನೆನೆಪನ್ನು ಹಸಿಯಾಗಿಸುವ ಹೃತೀಕ್ಷಾ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾಳೆ.
ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಗುಮ್ಮನಕೊಲ್ಲಿಯ ನಿವಾಸಿ ನವೀನ್ ಅವರ ಪತ್ನಿ ಪ್ರಭಾ ಎಂಬುವರು ಮೇ 16ರಂದು ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ವೇಳೆ ಪ್ರಭಾ ಅವರ ಮೃತದೇಹದೊಂದಿಗೆ ಅವರ ವಸ್ತುಗಳಿದ್ದ ಬ್ಯಾಗ್ ಅನ್ನು ಅವರ ಪತಿ ನವೀನ್ ಅವರಿಗೆ ಆಸ್ಪತ್ರೆ ಸಿಬ್ಬಂದಿ ಹಿಂದಿರುಗಿಸಿದ್ದರು. ಆದರೆ ಅವರೊಂದಿಗಿದ್ದ ಫೋನ್ ಅನ್ನು ಮಾತ್ರ ಹಿಂದಿರುಗಿಸಿರಲಿಲ್ಲ. ಅಮ್ಮನ ನೆನೆಪಿನ ಮೊಬೈಲ್‌ಗೆ ಆಸ್ಪತ್ರೆ ಸಿಬ್ಬಂದಿಗೆ ಮನವಿ ಮಾಡಿ ಎರಡು ಮೂರು ದಿನಗಳಾದರೂ ಫೋನ್ ಸಿಗದಿದ್ದಾಗ ಕೋವಿಡ್‌ನಿಂದ ಬಳಲುತ್ತಿದ್ದ ಬಾಲಕಿ ಹೃತೀಕ್ಷಾ ಮನೆಯಿಂದಲೇ ಜಿಲ್ಲಾಧಿಕಾರಿ ಮತ್ತು ಶಾಸಕರಿಗೆ ಬಹಿರಂಗ ಪತ್ರ ಬರೆದು ತನ್ನ ಅಮ್ಮನ ಫೋನ್ ಅನ್ನು ಹಿಂದಿರುಗಿಸುವಂತೆ ಮನವಿ ಮಾಡಿದ್ದಳು.
ಈ ಸಂಬಂಧ ವಿಡಿಯೋ ಒಂದನ್ನು ಮಾಡಿ, ನನ್ನ ಅಮ್ಮನಂತು ಹೋದರು, ಆದರೆ ಆ ಫೋನಿನಲ್ಲಿ ನಾನು, ನನ್ನ ಅಮ್ಮ ಎಲ್ಲರೂ ಜೊತೆಗಿರುವ ಫೋಟೋಗಳು ಅದರಲ್ಲಿವೆ. ಫೋನಿನಲ್ಲಿ ಅಲ್ಲದೆ, ಮನೆಯಲ್ಲಿ ಯಾವುದೇ ಫೋಟೋಗಳಿರಲಿಲ್ಲ. ಹೀಗಾಗಿ ನನ್ನ ಅಮ್ಮನ ನೆನಪು ಅದರಲ್ಲಿದೆ. ದಯವಿಟ್ಟು ಆ ಫೋನ್ ಹಿಂದಿರುಗಿಸಿ ಎಂದು 9 ವರ್ಷದ ಬಾಲಕಿ ಹೃತೀಕ್ಷಾ ಪರಿ ಪರಿಯಾಗಿ ಮನವಿ ಮಾಡಿದ್ದಳು.
ಬಾಲಕಿಗೆ ಮೊಬೈಲ್ ಹಿಂತಿರುಗಿಸುತ್ತಿರುವ ಫೋಟೋವನ್ನು ಟ್ವೀಟ್ ಮಾಡಿರುವ ಕೊಡಗು ಎಸ್‌ಪಿ ಕ್ಷಮಾ ಮಿಶ್ರಾ, "ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾದಿಂದ ಮೃತಪಟ್ಟ ಕುಶಾಲನಗರದ ಪ್ರಭಾ ಅವರಿಗೆ ಸೇರಿದ್ದ ಮೊಬೈಲ್ ಫೋನ್ ಕಳೆದು ಹೋಗಿತ್ತು. ಅದನ್ನು ಪತ್ತೆ ಮಾಡಿ ಅವರ ಮಗಳು ಹೃತೀಕ್ಷಾರವರಿಗೆ ಹಿಂತಿರುಗಿಸಲಾಯಿತು. ಇದು ಹೃತೀಕ್ಷಾ ಹಾಗೂ ನಮಗೂ ಸಂತೃಪ್ತಿಯ ಕ್ಷಣವಾಗಿದೆ" ತಿಳಿಸಿದ್ದಾರೆ.
ಇದನ್ನು ರಿಟ್ವೀಟ್ ಮಾಡಿರುವ ಡಿಜಿಪಿ ಪ್ರವೀಣ್ ಸೂದ್ ಅವರು, "ಕೊಡಗು ಎಸ್‌ಪಿ ಮತ್ತು ಅವರ ನೇತೃತ್ವದ ತಂಡವು ಉತ್ತಮ ಕಾರ್ಯ ಮಾಡಿದೆ. ನೀವು ಭರವಸೆಯನ್ನು ಈಡೇರಿಸಿದ್ದೀರಿ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
19/08/2021 10:07 pm