ವಿಜಯನಗರ: ಶಿಕ್ಷಕರ ಬೇಜವಾಬ್ದಾರಿಯಿಂದ ವಿದ್ಯಾರ್ಥಿಯೋರ್ವ ಕಣ್ಣು ಕಳೆದುಕೊಂಡ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ನಡೆದಿದೆ.
ಕೂಡ್ಲಿಗಿ ಸಮೀಪದ ಚೌಡಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದ ಪ್ರಜ್ವಲ್ ಕಣ್ಣು ಕಳೆದುಕೊಂಡ ವಿದ್ಯಾರ್ಥಿ. ಶಾಲೆಯಲ್ಲಿ 300 ಮಕ್ಕಳಿದ್ದಾರೆ. ಆದರೆ ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲ ಎನ್ನುವ ಆರೋಪ ಇದೆ. ಹೀಗಿರುವಾಗ ಶಿಕ್ಷಕರ ಬದಲಿಗೆ ಶಾಲೆಯಲ್ಲಿ ಮತ್ತೊಂದು ಮಗುವಿಗೆ ಶಾಲೆಯ ಜವಾಬ್ದಾರಿ ಹೊರಿಸಿ, ಮಕ್ಕಳು ಗಲಾಟೆ ಮಾಡದಂತೆ ನೋಡಿಕೊಳ್ಳುವಂತೆ ಹೇಳಿದ್ದಾರೆ. ಆಗ ಪ್ರಜ್ವಲ್ ಸೇರಿದಂತೆ ಉಳಿದ ಮಕ್ಕಳು ಗಲಾಟೆ ಮಾಡಿದ್ದಾರೆ.
ಶಾಲೆಯ ಜವಾಬ್ದಾರಿ ಹೊತ್ತ ಹುಡುಗ, ಕೈಯಲ್ಲಿ ಹಿಡಿದ ಕಡ್ಡಿ ಎಸೆದಿದ್ದಾನೆ. ಅದು ನೇರವಾಗಿ ವಿದ್ಯಾರ್ಥಿ ಪ್ರಜ್ವಲ್ ಕಣ್ಣಿಗೆ ಬಿದ್ದಿದೆ. ಪರಿಣಾಮ ಪ್ರಜ್ವಲ್‌ನ ಕಣ್ಣು ಗುಡ್ಡೆ ಸಂಪೂರ್ಣ ಹಾಳಾಗಿ ಕಣ್ಣು ಕುರುಡಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಿದ ವೈದ್ಯರು ಮಗುವಿಗೆ ಕಣ್ಣಿನ ದೃಷ್ಟಿ ಮರಳಿ ಬರುವುದಿಲ್ಲ ಎಂದಿದ್ದಾರೆ.
ಈ ಸಂಬಂಧ ಪೋಷಕರು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶಿಕ್ಷಕರ ಬೇಜವಾಬ್ದಾರಿ ಕುರಿತು ಶಿಕ್ಷಣ ಇಲಾಖೆಗೆ ಪೋಷಕರು ಸಾಕಷ್ಟು ದೂರು ನೀಡಿದ್ದರು. ಶಿಕ್ಷಣ ಇಲಾಖೆ ಇತ್ತ ಗಮನ ಹರಿಸಿಲ್ಲಾ ಎನ್ನುವುದು ಸ್ಥಳೀಯರ ಆರೋಪವಾಗಿದೆ.
PublicNext
07/01/2022 09:07 pm