ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ವಿಚಾರಣೆ ಎದುರಿಸಿರುವ ನಿರೂಪಕಿ, ನಟಿ ಅನುಶ್ರೀ ಕಣ್ಣೀರು ಹಾಕಿದ್ದಾರೆ.
ಈ ಹಿನ್ನಲೆ ವೀಡಿಯೋ ಮಾಡಿರುವ ಅವರು, "ಈ ವೀಡಿಯೋವನ್ನು ನಾನು ನನ್ನನ್ನು ಸಮರ್ಥಿಸಿಕೊಳ್ಳಲು ಅಥವಾ ಕರುಣೆಗೋಸ್ಕರ ಮಾಡುತ್ತಿಲ್ಲ. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಸುತ್ತಮುತ್ತ ಹೇಳುತ್ತಿದ್ದಾರೆ. ಈ ಅಭಿಪ್ರಾಯಗಳು ನನ್ನ ಬಗ್ಗೆ ಇರುವುದರಿಂದ ಈ ವೀಡಿಯೋ ಮಾಡುತ್ತಿದ್ದೇನೆ, 20020ರ ಸೆಪ್ಟೆಂಬರ್ 24 ನನ್ನ ಜೀವನದ ಯಾವ ಘಟ್ಟದಲ್ಲೂ ನಾನು ಮತ್ತೆ ನೆನಪಿಸಿಕೊಳ್ಳೋದಕ್ಕೆ ಇಷ್ಟಪಡದಿರುವಂತಹ ದಿನ. 12 ವರ್ಷಗಳ ಹಿಂದೆ ನಾನು ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಗೆದ್ದಾಗ, ಆ ದಿನ ಭವಿಷ್ಯದಲ್ಲಿ ಮುಳ್ಳಾಗುತ್ತೆ ಅಂತ ಅಂದುಕೊಂಡಿರಲಿಲ್ಲ, ನೋಟಿಸ್ ಬಂದಿರುವುದು ನನಗೆ ಬೇಜಾರಾಗಿಲ್ಲ.
ಸಿಸಿಬಿ ಕಚೇರಿಗೆ ಹೋದ ಮಾತ್ರಕ್ಕೆ ನಾನು ಅಪರಾಧಿ ಅಥವಾ ಆರೋಪಿ ಅಂತ ಆಗುವುದಿಲ್ಲ. ಆ ವಿಚಾರದಲ್ಲಿ ನನ್ನನ್ನು ಬಿಂಬಿಸಿದ ರೀತಿ ನನಗೆ ತುಂಬಾನೇ ನೋವು ಮಾಡಿತ್ತು. ನೋವು ತುಂಬಾ ಸಣ್ಣ ಪದ. ಕಳೆದ ಒಂದು ವಾರದಿಂದ ನಮ್ಮ ಮನೆಯವರ ನೆಮ್ಮದಿಯನ್ನು ಹಾಳು ಮಾಡಿತ್ತು. ಆದರು ಕೂಡ ಈ ಕಷ್ಟಕಾಲದಲ್ಲಿ ಏನೂ ಹೆಳದೆ, ಏನೂ ಕೇಳದೆ ಅನುಶ್ರೀ ನೀವೇನು ಅಂತ ನಮಗೆ ಚೆನ್ನಾಗಿ ಗೊತ್ತು. ನಿಮ್ಮ ಮೇಲೆ ನಮಗೆ ಅಪಾರವಾದ ನಂಬಿಕೆ ಇದೆ ಅಂತ ನನ್ನ ಜೊತೆ ನಿಂತಿರುವ ಎಲ್ಲಾ ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳು. ಇದನ್ನು ನಾನು ಯಾವತ್ತೂ ಮರೆಯಲ್ಲ.
ಇದನ್ನು ಮೀರಿ ಕೂಡ ಸುತ್ತಮುತ್ತ ಕೆಲವೊಂದಷ್ಟು ಅಭಿಪ್ರಾಯಗಳು, ವಿಚಾರಗಳು, ಅಂತೆಕಂತೆಗಳು ಇದು ನಮ್ಮ ನೆಮ್ಮದಿನ ತುಂಬಾನೇ ಹಾಳು ಮಾಡುತ್ತಿದೆ. ದಯಮಾಡಿ ಇಂತಹ ವಿಚಾರಗಳನ್ನು ಹರಿದಾಡಿಸುವ ಮುನ್ನ ಒಂದು ಬಾರಿ ನಮ್ಮ ಮನಸ್ಥಿತಿ ಬಗ್ಗೆ ಯೋಚನೆ ಮಾಡಿ. ನಾನಿಷ್ಟೆ ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ" ಎಂದು ಕಣ್ಣೀರಿಟ್ಟು ಮನವಿ ಮಾಡಿಕೊಂಡಿದ್ದಾರೆ.
ಇಷ್ಟೊಂದು ಕಷ್ಟದ ದಿನಗಳಲ್ಲಿ ನನಗೆ ನೆರಳಾಗಿ ನಿಂತಿರುವ ನನ್ನ ಕುಟುಂಬ, ನನ್ನ ತಂಡ, ಸ್ನೇಹಿತರು ಎಲ್ಲರಿಗೂ ಧನ್ಯವಾದಗಳು. ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನನ್ನನ್ನು ಬೆಂಬಲಿಸುತ್ತಿರೋ ಮಾಧ್ಯಮಮಿತ್ರರಿಗೂ ಧನ್ಯವಾದ. ಕನ್ನಡಿಗರು ಕೊಟ್ಟ ಈ ಹೆಸರಿಗೆ ಯಾವುದೇ ಧಕ್ಕೆ ಬರುವಂತಹ ಯಾವುದೇ ಕೆಲಸವನ್ನು ನಾನು ಮಾಡಿಲ್ಲ. ಮುಂದೆಯೂ ಮಾಡಲ್ಲ" ಎಂದು ಹೇಳುತ್ತಾ ಅನುಶ್ರೀ ಗಳಗಳನೇ ಕಣ್ಣೀರಿಟ್ಟಿದ್ದಾರೆ.
ಮಂಗಳೂರಿನಲ್ಲಿ ಡ್ಯಾನ್ಸರ್ ಕಿಶೋರ್ ಹಾಗೂ ತರುಣ್, ನೌಶೀನ್ ಎಂಬವರನ್ನು ಬಂಧಿಸಲಾಗಿತ್ತು, ವಿಚಾರಣೆಯ ವೇಳೆ ತರುಣ್, ಅನುಶ್ರೀ ನಾವು ಡ್ರಗ್ ಪಾರ್ಟಿ ಮಾಡುತ್ತಿದ್ವಿ, ಪಾರ್ಟಿಯಲ್ಲಿ ಅನುಶ್ರೀ ಡ್ರಗ್ಸ್ ತೆಗೆದುಕೊಳ್ಳತ್ತಿದ್ದಳು ಎಂದು ಬಾಯ್ಬಿಟ್ಟಿದ್ದಾನೆ ಎನ್ನಲಾಗಿತ್ತು. ಡ್ರಗ್ಸ್ ಪೆಡ್ಲರ್ ಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ನಿರೂಪಕಿ ಅನುಶ್ರೀಗೆ ಈ ಹಿಂದೆ ಸಿಸಿಬಿ ನೋಟಿಸ್ ನೀಡಿತ್ತು. ಹೀಗಾಗಿ ಅನುಶ್ರೀ ವಿಚಾರಣೆಗೆ ಹಾಜರಾಗಿದ್ದರು.
PublicNext
02/10/2020 10:57 am