ದಾವಣಗೆರೆ : ಜಮೀನು ಮಾರಾಟ ಸಂಬಂಧ ಮತ್ತು ಹಣಕಾಸು ವ್ಯವಹಾರದಲ್ಲಿ ಉಂಟಾದ ವೈಷಮ್ಯದಿಂದ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಸುಟ್ಟು ಹಾಕಿದ್ದ ತಂದೆ ಮತ್ತು ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಭಗತ್ ಸಿಂಗ್ ನಗರದ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರ ಎಂ.ಕೆ. ಕೃಷ್ಣಪ್ಪ ಹಾಗೂ ಮಗ ಸತೀಶ ಬಂಧಿತರು.
ಇತ್ತೀಚೆಗೆ 6 ಎಕರೆ ಜಮೀನು ಮಾರಾಟಕ್ಕೆ ಸಂಬಂಧಿಸಿ ವ್ಯವಹಾರ ನಡೆದಿದ್ದು, ಇದರಲ್ಲಿ ಬಂದಿದ್ದ ಹಣವನ್ನು ಕೊಲೆಯಾದ ವೀರೇಶ್(33) ಬಳಕೆ ಮಾಡಿಕೊಂಡಿದ್ದಾನೆ. ಅಲ್ಲದೆ, ಜಮೀನು ನೋಂದಣಿ ಸಹ ಮಾಡಿಕೊಟ್ಟಿಲ್ಲ. ಇದರಿಂದ ಬೇಸತ್ತು ಕೃಷ್ಣಪ್ಪ ಮತ್ತು ಅವರ ಮಗ ವೀರೇಶನನ್ನು ಊಟಕ್ಕೆಂದು ತಮ್ಮ ಮನೆಗೆ ಕರೆದು ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ಓಮ್ನಿಯಲ್ಲಿ ಹುಲಿಕಟ್ಟೆ ಗ್ರಾಮಕ್ಕೆ ಕೊಂಡುಹೋಗಿ ಅಲ್ಲಿನ ಗೋಮಾಳ ಜಾಗದಲ್ಲಿ ಮೃತದೇಹಕ್ಕೆ ಡಿಸೇಲ್ ಸುರಿದು ಸುಟ್ಟು ಹಾಕಿ, ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತ ರಾಯ ತಿಳಿಸಿದರು. ಸಂಪೂರ್ಣವಾಗಿ ಸುಟ್ಟು ಹೋಗಿ ಗುರುತು ಸಿಗದ ಸ್ಥಿತಿಯಲ್ಲಿದ್ದ ಶವದ ಮೇಲಿದ್ದ ಬೆಳ್ಳಿಯ ಕಡಗ ಮತ್ತು ಉಂಗುರದ ಆಧಾರದ ಮೇಲೆ ವೀರೇಶನ ಪತ್ನಿ ಶವ ಗುರುತಿಸಿದ್ದಾರೆ. ಪ್ರಕರಣ ದಾರಿ ತಪ್ಪಿಸಲು ಬೆಂಗಳೂರು ಮತ್ತು ಮೈಸೂರಿನಲ್ಲಿ ಸಿಮ್ ಆನ್ ಮಾಡಿದ್ದಾರೆ. ಜೊತೆಗೆ ಅವನ ಬೈಕ್‌ನ್ನು ಹರಿಹರದಲ್ಲಿ ಬಿಟ್ಟು ಬಂದಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದ ಅವರು, ತಂಡಕ್ಕೆ ಬಹುಮಾನ ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಎಸ್ಪಿ ರಾಜೀವ್, ಗ್ರಾಮಾಂತರ ಠಾಣೆ ಡಿವೈಎಸ್ಪಿ ನರಸಿಂಗ್ ತಾಮ್ರಧ್ವಜ್, ಸಿಪಿಐ ಮಂಜುನಾಥ, ಪಿಎಸ್‌ಐ ಆಶ್ವಿನ್‌ಕುಮಾರ್ ಹಾಗೂ ಸಿಬ್ಬಂದಿ ಇದ್ದರು.
PublicNext
11/12/2020 09:06 pm