ಬೆಂಗಳೂರು: ಖಾಸಗಿ ಸಂಸ್ಥೆಗೆ ಕಾರ್ಮಿಕರ ನೇಮಕಾತಿಗೆ ಪರವಾನಗಿ ನೀಡಲು 1.80 ಲಕ್ಷ ರೂ. ಲಂಚ ಪಡೆದ ಕಾರ್ಮಿಕ ಇಲಾಖೆಯ ಹಾಲಿ ಮತ್ತು ನಿವೃತ್ತ ಅಧಿಕಾರಿಗಳನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಬನ್ನೇರುಘಟ್ಟ ರಸ್ತೆಯಲ್ಲಿರುವ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಹಾಯಕ ಕಾರ್ಮಿಕ ಆಯುಕ್ತ ಸಂತೋಷ್ ಹಿಪ್ಪರಗಿ ಮತ್ತು ನಿವೃತ್ತ ಕಾರ್ಮಿಕ ಇನ್ಸ್‌ಪೆಕ್ಟರ್ ಶಿವಕುಮಾರ್ ಬಂಧಿತ ಆರೋಪಿಗಳು. ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಭ್ರಷ್ಟ ಅಧಿಕಾರಿಗಳನ್ನು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ನಿವಾಸಿಯೊಬ್ಬರು ಖಾಸಗಿ ಸಂಸ್ಥೆಯಲ್ಲಿ ಡೆಪ್ಯುಟಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಗೆ ದಿನಗೂಲಿ ಕಾರ್ಮಿಕರ ಅಗತ್ಯವಿತ್ತು. ತಾತ್ಕಾಲಿಕವಾಗಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಪರವಾನಗಿ ಕೋರಿ ಬನ್ನೇರುಘಟ್ಟ ರಸ್ತೆಯ ಕಾರ್ಮಿಕ ಭವನದಲ್ಲಿನ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಗೆ 2017ರ ಜನವರಿಯಲ್ಲಿಅರ್ಜಿ ಸಲ್ಲಿಸಲಾಗಿತ್ತು. ಖಾಸಗಿ ಕಂಪನಿಯ ಪ್ರಧಾನ ಕಚೇರಿ ಮಹಾರಾಷ್ಟ್ರದ ಪುಣೆಯಲ್ಲಿದೆ. ತಾತ್ಕಾಲಿಕ ಪರವಾನಗಿ ನೀಡಲು ಅಧಿಕಾರಿ ಸಂತೋಷ್ 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು, 1.80 ಲಕ್ಷ ರೂ.ಗೆ ಒಪ್ಪಿದ್ದರು. ಲಂಚ ನೀಡಲು ಇಚ್ಛಿಸದ ಅರ್ಜಿದಾರ, ಎಸಿಬಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಸಂತೋಷ್ ಮತ್ತು ಅವರ ಪರವಾಗಿ ಲಂಚ ಸ್ವೀಕರಿಸಿದ ಶಿವಕುಮಾರ್ ಅವರನ್ನು ಎಸಿಬಿ ಬಂಧಿಸಿದೆ.
ಆರೋಪಿತ ಅಧಿಕಾರಿ ಸಂತೋಷ ಹಿಪ್ಪರಗಿ ಅವರ ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿರುವ ಮನೆಯಲ್ಲಿ ಶೋಧ ನಡೆಸಿದಾಗ 10.50 ಲಕ್ಷ ರೂ. ಪತ್ತೆಯಾಗಿದೆ. ಮನೆಯಲ್ಲಿ ಹಲವು ಕವರ್‌ಗಳು, ದಾಖಲೆಗಳು ಸಿಕ್ಕಿವೆ. ಸಿಕ್ಕಿರುವ ಎಲ್ಲ ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆದಾಯಕ್ಕೂ ಮೀರಿ ಆಸ್ತಿ ಹೊಂದಿದ್ದಲ್ಲಿ ಪ್ರತ್ಯೇಕ ಕೇಸ್ ಕೂಡ ದಾಖಲಿಸಿಕೊಳ್ಳಲಾಗುತ್ತದೆ ಎಂದು ಎಸಿಬಿ ಎಸ್‌ಪಿ ಕುಲ್‌ದೀಪ್ ಜೈನ್ ತಿಳಿಸಿದ್ದಾರೆ.
PublicNext
03/12/2020 07:52 am