ಬೆಂಗಳೂರು: ಮೈಸೂರು- ಪುದುಕೋಟೈ ಪ್ಯಾಸೆಂಜರ್ ಎಕ್ಸ್‌ಪ್ರೆಸ್ ರೈಲು ಆನೇಕಲ್ ತಾಲೂಕಿನ ಆವಲಹಳ್ಳಿ ಬಳಿ ಟ್ರಕ್‌ವೊಂದಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಆನೇಕಲ್ ಬಳಿಯ ಆವಲಹಳ್ಳಿ ರೈಲಿನ ಹಳಿಯ ಮೇಲೆ ಸೋಮವಾರ ರಾತ್ರಿ 9ಕ್ಕೆ ಈ ಘಟನೆ ನಡೆದಿದೆ. ಡಿಕ್ಕಿ ರಭಸಕ್ಕೆ ಟ್ರಕ್ ಮೂರು ಭಾಗಗಳಾಗಿವೆ. ರೈಲಿನಲ್ಲಿ 1,380ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಟ್ರಕ್ ಚಾಲಕ ಗೂಗಲ್ ಮ್ಯಾಪ್ ನಂಬಿ ಟ್ರಕ್ ಚಲಾಯಿಸಿಕೊಂಡು ಬಂದಿದ್ದಾನೆ. ಆದರೆ 2 ವರ್ಷಗಳ ಹಿಂದೆಯೇ ಆ ರಸ್ತೆ ಬಂದ್ ಆಗಿದ್ದು, ಪಕ್ಕದಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಲಾಗಿದೆ. ಸಣ್ಣ ಮಳೆಯಾದರೂ ಈ ಅವೈಜ್ಞಾನಿಕ ಅಂಡರ್ ಪಾಸ್‌ನಲ್ಲಿ ನೀರು ತುಂಬಿಕೊಳ್ಳುತ್ತದೆ. ಇದೀಗ ಆ ಅಂಡರ್ ಪಾಸ್ ದುರಸ್ತಿ ಕಾರ್ಯ ಮಂದಗತಿಯಲ್ಲಿ ನಡೆಯುತ್ತಿದೆ. ಟ್ರಕ್ ಚಾಲಕ ಹಳಿ ದಾಟುವ ಹೊತ್ತಿಗೆ ರೈಲು ಬಂದಿದೆ. ತಕ್ಷಣವೇ ಟ್ರಕ್ ಚಾಲಕ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ. ಆದರೆ ಟ್ರಕ್ ಎಂಜಿನ್ ಅನ್ನು ರೈಲು ಸುಮಾರು ಅರ್ಧ ಕಿ.ಮೀ.ವರೆಗೆ ಎಳೆದೊಯ್ದಿದೆ.
ಮುರ್ನಾಲ್ಕು ಗಂಟೆಗಳ ಕಾಲ ಟ್ರಕ್ ಎಂಜಿನ್ ಅನ್ನು ಹಳಿ ಮೇಲಿಂದ ಎತ್ತಲು ಹರಸಾಹಸ ಪಡಲಾಯಿತು. ಇದರಿಂದ ಕೇರಳ, ತಮಿಳುನಾಡಿನ 2 ರೈಲುಗಳನ್ನ ತಡೆಯಲಾಗಿತ್ತು. ಈ ಎಡವಟ್ಟಿಗೆ ರೈಲ್ವೆ ಇಲಾಖೆಯೇ ಕಾರಣವೆಂದು ಪ್ರಯಾಣಿಕರು ದೂರಿದ್ದಾರೆ.
PublicNext
21/09/2021 08:35 am