ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾರ್ಲಿ ಸಿನಿಮಾ ನೋಡಿ ಬಿಕ್ಕಿ ಬಿಕ್ಕಿ ಅತ್ತ ಸಿಎಂ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ (ಜೂನ್ 13ರ) ಸಂಜೆ ಬೆಂಗಳೂರಿನ ಒರಾಯನ್ ಮಾಲ್​ನಲ್ಲಿ ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ವೀಕ್ಷಿಸಿ ಭಾವುಕರಾಗಿ ಕಣ್ಣೀರಿಟ್ಟರು.

ಕೆಲವು ತಿಂಗಳ ಹಿಂದಷ್ಟೆ ತಮ್ಮ ಮುದ್ದಿನ ನಾಯಿಯನ್ನು ಕಳೆದುಕೊಂಡಿದ್ದರು. ತಮ್ಮ ಪ್ರೀತಿಯ ನಾಯಿ ತೀರಿಕೊಂಡ ದಿನ ಕುಟುಂಬ ಸದಸ್ಯನನ್ನು ಕಳೆದುಕೊಂಡಂತೆ ಕಣ್ಣೀರು ಹಾಕಿದ್ದ ಸಿಎಂ, ನಿನ್ನೆ ರಾತ್ರಿ '777 ಚಾರ್ಲಿ' ನೋಡಿ ಅಗಲಿದ ತಮ್ಮ ಪ್ರೀತಿಯ ನಾಯಿಯನ್ನು ನೆನದು ಕಣ್ಣೀರು ಹಾಕಿದ್ದಾರೆ. ಸಿಎಂ ಕಣ್ಣೀರು ಹಾಕಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಸಿನಿಮಾವನ್ನು ಮಧ್ಯಂತರದವರೆಗೆ ನೋಡಿ ಬಂದು ಮಾಧ್ಯಮ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, 'ಈಗಿನನ್ನೂ ಅರ್ಧ ಸಿನಿಮಾ ನೋಡಿದ್ದೇವೆ. ಸಿನಿಮಾದಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧದ ಬಗ್ಗೆ ಹೇಳಲಾಗಿದೆ. ಅದರಲ್ಲಿಯೂ ಶ್ವಾನ, ಮನುಷ್ಯನನ್ನು ಅತಿಯಾಗಿ ಪ್ರೀತಿಸುವ ಪ್ರಾಣಿ, ಅದರ ಬಗ್ಗೆ ಕತೆ ಮಾಡಲಾಗಿದೆ. ಶ್ವಾನ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಮಾರ್ಮಿಕವಾಗಿ, ಸೂಕ್ಷ್ಮವಾಗಿ ಹಾಗೂ ಭಾವನಾತ್ಮಕವಾಗಿ ನಿರ್ದೇಶಕ ಕಿರಣ್ ರಾಜ್ ಹೇಳಿದ್ದಾರೆ' ಎಂದಿದ್ದಾರೆ.

'ಪ್ರಾಣಿಗಳನ್ನು ಹಿಂಸಿಸಬಾರದು, ದೂಷಿಸಬಾರದು, ನೋಯಿಸಬಾರದು. ಪ್ರಾಣಿಗಳನ್ನು ರಕ್ಷಣೆ ಮಾಡಬೇಕು, ಸಾಧ್ಯವಾದರೆ ಅನಾಥ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಬೇಕು, ಇದರಿಂದ ನಮಗೆ ಹೆಚ್ಚು ಪ್ರೀತಿ, ಸಂತೋಶ ಧಕ್ಕುತ್ತದೆ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂಬ ಸಂದೇಶ ಸಿನಿಮಾದಲ್ಲಿದೆ'' ಎಂದ ಸಿಎಂ, ರಕ್ಷಿತ್ ಶೆಟ್ಟಿಯನ್ನು ಹೊಗಳುತ್ತಾ, ''ನಾಯಿಯೊಂದಿಗೆ ನಟಿಸುವಾಗ ಬಹಳ ತಾಳ್ಮೆ ಇರಬೇಕಾಗುತ್ತದೆ, ಅದರ ಮನಸ್ಥಿತಿ ಅರ್ಥ ಮಾಡಿಕೊಂಡು ನಟಿಸಬೇಕಾಗುತ್ತದೆ. ಅದನ್ನು ರಕ್ಷಿತ್ ಶೆಟ್ಟಿಯವರು ಬಹಳ ಅದ್ಭುತವಾಗಿ ನಿಭಾಯಿಸಿದ್ದಾರೆ' ಎಂದಿದ್ದಾರೆ.

''ಕನ್ನಡ ಚಿತ್ರರಂಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡುತ್ತಾ ಇದೆ. 'ಕೆಜಿಎಫ್ 2' ನಂತರ ಕೇವಲ ಮಾಸ್ ಸಿನಿಮಾ ಅಲ್ಲ, ಅರ್ಥಪೂರ್ಣವಾದ, ಭಾವುಕ ಅಂಶವುಳ್ಳ ಸಿನಿಮಾಗಳನ್ನು ಸಹ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಸಾಧಿಸಬಹುದು ಎಂಬುದನ್ನು ರಕ್ಷಿತ್ ಶೆಟ್ಟಿ ಮತ್ತು ಬಳಗ ತೋರಿಸಿಕೊಟ್ಟಿದೆ. ಹಾಗಾಗಿ ಈ ಸಿನಿಮಾವನ್ನು ಎಲ್ಲರೂ ನೋಡಬೇಕು. ಎಲ್ಲರೂ ಪ್ರಾಣಿ ಪ್ರೇಮಿಗಳಾಗಬೇಕು ಎಂದು ಕರೆ ಕೊಡುತ್ತೀನಿ'' ಎಂದರು ಸಿಎಂ.

ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಸಚಿವರಾದ ಆರ್.ಅಶೋಕ್, ಸುಧಾಕರ್, ಬಿ.ಸಿ ನಾಗೇಶ, ಶಾಸಕ ರಘುಪತಿ ಭಟ್, ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಕಿರಣ್ ರಾಜ್, ನಟಿ ಸಂಗೀತಾ ಶೃಂಗೇರಿ ಮತ್ತು ಇತರರು ಸಿನಿಮಾ ನೋಡಿದರು.

Edited By : Vijay Kumar
PublicNext

PublicNext

14/06/2022 06:02 pm

Cinque Terre

94 K

Cinque Terre

5