ಮುಂಬೈ: ಖ್ಯಾತ ಸಂಗೀತ ನಿರ್ದೇಶಕ, ಆಸ್ಕರ್ ಪ್ರಶಸ್ತಿ ಪುರಸ್ಕೃತ ಎ.ಆರ್.ರೆಹಮಾನ್ ಅವರ ಮೂಲ ಹೆಸರು ದಿಲೀಪ್ ಕುಮಾರ್. ನಾಳೆ (ಜ.6ರಂದು) 55ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರೆಹಮಾನ್ ಅವರ ಜೀವನದ ರಹಸ್ಯ ಇಲ್ಲಿದೆ.
ಎ.ಆರ್.ರೆಹಮಾನ್ ಅವರು ಮೂಲತಃ ಹಿಂದೂ ಧರ್ಮಿಯರು. ಆದರೆ ದಿಲೀಪ್ ಕುಮಾರ್ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಎ.ಆರ್.ರೆಹಮಾನ್ ಆಗಿ ಮುಸ್ಲಿಂ ಯುವತಿಯನ್ನೇ ಮದುವೆಯಾಗಿ ಇದೀಗ ಮುಸ್ಲಿಂ ಯುವಕನ ಜೊತೆಗೆ ಮಗಳ ನಿಶ್ಚಿತಾರ್ಥವನ್ನು ಮಾಡಿದ್ದಾರೆ.
ಮತಾಂತರಗೊಂಡಿದ್ದೇಕೆ?
ರೆಹಮಾನ್ ಅವರ ತಂದೆ-ತಾಯಿ ಹಿಂದೂಗಳಾಗಿದ್ದು, ಬಹಳ ದೈವಭಕ್ತರಾಗಿದ್ದರು. ದಿಲೀಪ್ ಕುಮಾರ್ ಅವರು ಚಿಕ್ಕವರಿರುವಾಗಲೇ ಅವರ ತಂದೆ ಮತ್ತು ಅಕ್ಕ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ತೀರಾ ಬಡತನದಲ್ಲಿದ್ದ ಈ ಕುಟುಂಬದವರು ತಮಗೆ ದೇವರು ಮಾತ್ರ ಕೈಹಿಡಿಯಲು ಸಾಧ್ಯ ಎಂದು ನಂಬಿದ್ದರು. ಆದರೆ ಅನಾರೋಗ್ಯ ವಿಪರೀತವಾಗಿ ದಿಲೀಪ್ ಕುಮಾರ್ ತಂದೆ ತೀರಿಕೊಂಡರು. ಅಕ್ಕ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರು. ತಂದೆಯ ಸಾವಿನ ಬಳಿಕ ದಿಲೀಪ್ ಕುಮಾರ್ ಕುಟುಂಬ ಅಕ್ಷರಶಃ ನಲುಗಿ ಹೋಯಿತು. ತೀರಾ ಚಿಕ್ಕವಯಸ್ಸಿನವರಾದ ದಿಲೀಪ್ ಕುಮಾರ್ ಅವರಿಗೆ ದೇವರ ಮೇಲೆಯೇ ನಂಬಿಕೆ ಹೊರಟುಹೋಯಿತಂತೆ.
ತಮ್ಮ ತಂದೆಯ ಸಾವಿಗೆ ದೇವರೇ ಹೊಣೆ ಎಂದು ಅಂದುಕೊಂಡರು. ಅಕ್ಕನ ಬದುಕಿಸುವ ಪ್ರಯತ್ನದಲ್ಲಿ ಇರುವಾಗಲೇ ಅವರಿಗೆ ಸಿಕ್ಕಿದ್ದು ಸೂಫಿ. ಅಕ್ಕನ ಜೀವವನ್ನು ತಾವು ಉಳಿಸುವುದಾಗಿ ಹೇಳಿಕೊಂಡ ಸೂಫಿ ಪುಟ್ಟ ಬಾಲಕ ದಿಲೀಪ್ ಕುಮಾರನಿಗೆ ‘ಬುದ್ಧಿ’ ಹೇಳಿದರು. ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರೆ ಅಕ್ಕಳನ್ನು ಬದುಕಿಸಬಹುದು ಎಂದರು. ನಂತರ ಇಡೀ ಕುಟುಂಬ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿತು. (ಅವರ ಅಕ್ಕನಿಗೆ ನಂತರ ಏನಾಯಿತು ಎಂಬ ಮಾಹಿತಿ ವಿವರಿಸಲಿಲ್ಲ). ಅಲ್ಲಿಂದ ದಿಲೀಪ್ ಕುಮಾರ್ ಅಲ್ಲಾಹ್ ರಕ್ಖಾ ರೆಹಮಾನ್ (ಎ.ಆರ್.ರೆಹಮಾನ್) ಆದರು.
ಅವರ ಮಗಳ ನಿಶ್ಚಿತಾರ್ಥದ ಹಿನ್ನೆಲೆಯಲ್ಲಿ ಹಾಗೂ ಅವರ ಹುಟ್ಟುಹಬ್ಬದ ನಿಮಿತ್ತ ತಮ್ಮ ಜೀವನದ ಕುರಿತು ಮಾಧ್ಯಮವೊಂದಕ್ಕೆ ನೀಡಿದ ಈ ಸಂದರ್ಶನ ವೈರಲ್ ಆಗುತ್ತಿದೆ.
PublicNext
05/01/2022 10:25 pm