ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ
ಕನ್ನಡ ಭಾಷೆ ಹಾಗೂ ಚಿತ್ರರಂಗದ ಸ್ಫೂರ್ತಿ ಸೆಲೆಯಾಗಿದ್ದ ನಟಸಾರ್ವಭೌಮ ರಾಜಕುಮಾರ್ ನಂತರ, ಕನ್ನಡಿಗರ ಮನಸೂರೆಗೊಂಡವರೆಂದರೆ ಡಾ. ವಿಷ್ಣುವರ್ಧನ್. ಕೊನೆಯುಸಿರುವ ಇರುವವರೆಗೆ ಅಭಿಮಾನಿಗಳ ಹೃದಯ ಸಂಪತ್ತನು ಕೊಳ್ಳೆ ಹೊಡೆದಿದ್ದ ಸಂಪತ್ ಕುಮಾರ್, ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ " ನಾಗರ ಹಾವು'' ಚಿತ್ರದಲ್ಲಿ ಹೆಡೆಬಿಚ್ಚಿದ್ದು. ಆ ಚಿತ್ರ ನೆನಪಾದರೆ ಭುಸಗುಡುವ ರಾಮಾಚಾರಿ ಇಂದಿಗೂ ಕಣ್ಮುಂದೆ ಬಂದು ನಿಲ್ಲುತ್ತಾರೆ.
ಇಂದು ಈ ಸಾಹಸ ಸಿಂಹನ ಜನ್ಮದಿನ. ಬದುಕಿದ್ದರೆ 71 ವರ್ಷಗಳಾಗಿರುತ್ತಿದ್ದವು. ಹಾಗೆ ನೋಡಿದರೆ ವಿಷ್ಣುವಿನ ಮೊದಲ ಚಿತ್ರ ವಂಶವೃಕ್ಷ. ಆದರೆ ನಾಯಕನಾಗಿ ಬೆಳಕಿಗೆ ಬಂದಿದ್ದು ನಾಗರ ಹಾವಿನ ಮೂಲಕ. ಇವರ ಮಾತು ನಡೆ ನುಡಿ ಹಾವ ಭಾವ ನಟನೆ ಎಲ್ಲ ಭಾಷಿಕ ನಟರು, ನಿರ್ದೇಶಕರು ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ಹೀಗಾಗಿಯೇ ಸುಮಾರು 37 ವರ್ಷಗಳ ಚಿತ್ರರಂಗದ ಪಯಣದಲ್ಲಿ ಕನ್ನಡ ಸೇರಿದಂತೆ ಹಿಂದಿ, ತೆಲಗು ತಮಿಳು ಹಾಗೂ ಮಲೆಯಾಳಿ, ಹೀಗೆ 227 ಸಿನೆಮಾಗಳಲ್ಲಿ ನಟಿಸಿದ್ದಾರೆ.
ಕೆಲವು ದಶಕಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಕಾಲೂರುವುದೆಂದರೆ ಅಸಾಧ್ಯದ ಮಾತಾಗಿತ್ತು. ಅದಕ್ಕೆ ಕಾರಣ ಏನು ಎಂದು ವಿವರಿಸಬೇಕಾಗಿಲ್ಲ. ರಾಜ್ ಅವರೊಂದಿಗೆ ನಟಿಸಿದ್ದ ಗಂಧದ ಗುಡಿ'' ಚಿತ್ರದಲ್ಲಿಯ ಒಂದು ದೃಶ್ಯದಿಂದ ಇವರನ್ನು ವಿಲನ್ ಮಾಡಲಾಯಿತು. ಆ ಘಟನೆ ಸತ್ಯಕ್ಕೆ ದೂರವಾಗಿದ್ದರೂ ವಿಷ್ಣು ಇಮೇಜ್ ಗೆ ಧಕ್ಕೆಯುಂಟು ಮಾಡುವ ಪ್ರಯತ್ನ ನಡೆಯಿತು.
ಆ ವಿವಾದದ ನಂತರ ವಿಷ್ಣುವರ್ಧನ್ ಎಂದಿಗೂ ವರನಟ ರಾಜಕುಮಾರ ಜೊತೆಯಾಗಿ ಅಭಿನಯಿಸುವ ಸಾಹಸ ಮಾಡಲಿಲ್ಲ. ಆದರೆ ವಿಷ್ಣು ರಾಜಕುಮಾರ್ ಅಭಿಮಾನಿಯಾಗಿದ್ದರೆ ರಾಜಕುಮಾರ್ ಸಹ ವಿಷ್ಣುವನ್ನು ತುಂಬಾ ಪ್ರೀತಿಸುತ್ತಿದ್ದರು.
ಆದರೆ ಯಾವುದಕ್ಕೂ ಜಗ್ಗದೆ ಬಗ್ಗದೆ " ಈ ರಾಮಾಚಾರಿನ್ ಕೆಣಕೊ ಗಂಡು ಇನ್ನೂ ಹುಟ್ಟಿಲ್ಲ '' ಎನ್ನುತ್ತಲೆ ಮುನ್ನಡೆದರೆ ಹೊರತು ಹಿಂದಿರುಗಿ ನೋಡಲಿಲ್ಲ. ನಟನಾಗಿ, ಖ್ಯಾತ ಹಿನ್ನೆಲೆ ಗಾಯಕಿಯರಾದ ಎಸ್. ಜಾನಕಿ, ವಾಣಿಜಯರಾಂ, ಪಿ. ಸುಶೀಲಾ ಜೊತೆ ಗಾಯಕನಾಗಿ ತಮ್ಮ ಪ್ರತಿಭೆ ಅನಾವರಣಗೊಳಿಸಿದರು. ವಿಷ್ಣುವಿನ ಯಶಸ್ಸಿನ ಹಿಂದೆ ತಾರಾ ಪತ್ನಿ ಶ್ರೀಮತಿ ಭಾರತಿ ಅವರ ಕೊಡುಗೆ ಅಪಾರ.
ವಿಷ್ಣು ಜೊತೆ ನಾಗರ ಹಾವಿನಲ್ಲಿ ವಿಲನ್ ಆಗಿದ್ದ ದಿ. ಅಂಬರೀಷ್ ಸಹ ಮುಂದೊಂದು ದಿನ ನಾಯಕನಟರಾಗಿ ವಿಜೃಂಬಿಸಿದರು.
ಬಂಧನ, ಈ ಬಂಧನ, ಸೂರ್ಯವಂಶ, ಮುತ್ತಿನ ಹಾರ, ಯಜಮಾನ, ಚಿತ್ರಗಳು ಇವರ ಅಭಿನಯದ ಅನರ್ಘ್ಯ ರತ್ನಗಳು.
ನಾಗರ ಹಾವು ನಂತರ ಕಪ್ಪು ಬಿಳುಪು ಚಿತ್ರ ಸೀತೆ ಅಲ್ಲ ಸಾವಿತ್ರಿ, ಭೂತಯ್ಯನ ಮಗ ಅಯ್ಯು, ದೇವರ ಗುಡಿ ಹೊಂಬಿಸಿಲು, ಬಂಧನ, ಲಯನ್ ಜಗಪತಿರಾವ್, ವೀರಪ್ಪ ನಾಯಕ ಹಾಗೂ ಆಪ್ತರಕ್ಷ ಚಿತ್ರಗಳ ವಿಷ್ಣುಗೆ ಖ್ಯಾತಿ ತಂದವು. ಇವುಗಳಲ್ಲಿ ಅನೇಕ ಚಿತ್ರಗಳು ಅತ್ಯುತ್ತಮ ಪ್ರಶಸ್ತಿ ತಂದು ಕೊಟ್ಟವು. ಇವರ ಜೀವಮಾನದ ಸಾಧನೆಗಾಗಿ ರಾಜಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಡಿ. 30, 2009 ರಂದು ಮೈಸೂರಿನ ಹೊಟೇಲೊಂದರಲ್ಲಿ ತೀವ್ರ ಹೃದಯಾಘಾತದಿಂದ ಚಿತ್ರರಂಗದ ಈ '' ಯಜಮಾನ '' ನಂಬಿದವರ " ಆಪ್ತರಕ್ಷಕ'' ಈ ಭವ " ಬಂಧನ '' ದಿಂದ ಮುಕ್ತರಾದರು.
ವಿಷ್ಣುವಿನ ನೆನಪಿಗಾಗಿ ಬೆಂಗಳೂರಿನ ರಸ್ತೆ, ಉದ್ಯಾನವನಕ್ಕೆ ಅವರ ಹೆಸರಿಡಲಾಗಿದೆ. ಅಭಿಮಾನಿಗಳು ಆಳೆತ್ತರದ ಪ್ರತಿಮೆ ಪ್ರತಿಷ್ಠಾಪಿಸಿ ಗೌರವ ಸೂಚಿಸಿದ್ದಾರೆ.
ಏನೇ ಆದರೂ ಈ ನರಮಾನವರ ಅರಣ್ಯದಲ್ಲಿ " ಸಿಂಹಾದ್ರಿ ಸಿಂಹ '' ಇನ್ನು ನೆನಪು ಮಾತ್ರ.
PublicNext
18/09/2021 01:52 pm