ಖ್ಯಾತ ನಟಿ ಶಾನ್ವಿ ಶ್ರೀವಾಸ್ತವ್ ಬ್ಯಾಂಗ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ತಮ್ಮ ಅಮೋಘ ಅಭಿನಯದ ಮೂಲಕ ಜನಮನ ಸೂರೆಗೊಂಡಿರುವ ಶಾನ್ವಿ ಅವರು ಈ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಪಾತ್ರ ನಿರ್ವಹಿಸುತ್ತಿದ್ದಾರೆ.
ಯು.ಕೆ.ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತಕುಮಾರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಆನ ಹಾಗೂ ನಾನು, ಅದು ಮತ್ತು ಸರೋಜ ಚಿತ್ರಗಳನ್ನು ನಿರ್ಮಾಣ ಮಾಡಿರುವ ಪೂಜಾ ವಸಂತಕುಮಾರ್ ಅವರ ನಿರ್ಮಾಣದ ಮೂರನೇ ಚಿತ್ರ 'ಬ್ಯಾಂಗ್'.
ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶನ ಹಾಗೂ ಹಲವು ಕಿರುಚಿತ್ರ ನಿರ್ದೇಶಿಸಿರುವ ಗಣೇಶ್ ಪರಶುರಾಮ್ ಈ ಚಿತ್ರದ ನಿರ್ದೇಶಕರು.ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ರಿತ್ವಿಕ್ ಮುರಳಿಧರ್ ಸಂಗೀತ ನೀಡುತ್ತಿದ್ದಾರೆ. ಉದಯಲೀಲ ಛಾಯಾಗ್ರಹಣ ಹಾಗೂ ವಿಜೇತ್ ಚಂದ್ರ ಸಂಕಲನ ಈ ಚಿತ್ರಕ್ಕಿದೆ. ಸೌಂಡ್ ಡಿಸೈನ್ ನವೀನ್ ಕುಮಾರ್ ಅವರದು.
ಬ್ಯಾಂಗ್ ಕೇವಲ ಏಳು - ಎಂಟು ಪಾತ್ರಗಳ ನಡುವೆ ಎರಡು ದಿನಗಳಲ್ಲಿ ನಡೆಯುವ ಕಥೆಯಾಗಿದ್ದು, ಶಾನ್ವಿ ಶ್ರೀವಾಸ್ತವ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದರೇ ಉಳಿದ ಪಾತ್ರಗಳಲ್ಲಿ ಅಭಿನಯಿಸಿರುವ ಕಲಾವಿದರ ಮಾಹಿತಿಯನ್ನು ಹಂತಹಂತವಾಗಿ ಪರಿಚಯಿಸಲಾಗುವುದು ಎನ್ನುತ್ತಾರೆ ಚಿತ್ರ ತಂಡದವರು.
ಈಗಾಗಲೇ ಬೆಂಗಳೂರಿನಲ್ಲಿ ಎರಡು ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಫೆಬ್ರವರಿಯಲ್ಲಿ ಮೂರನೇ ಹಂತದ ಚಿತ್ರೀಕರಣ ಮಂಗಳೂರಿನಲ್ಲಿ ನಡೆಯಲಿದೆ.
PublicNext
27/01/2021 12:29 pm