ಶ್ರೀ ಮಾತಾಂಬುಜಾ ಮೂವೀಸ್ ಲಾಂಛನದಲ್ಲಿ ಮಧುಸೂದನ್ ಹವಾಲ್ದಾರ್ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಶ್ರೀಜಗನ್ನಾಥದಾಸರು ಎಂಬ ಚಲನಚಿತ್ರ ಹಾಗೂ ಧಾರಾವಾಹಿಯ ಮುಹೂರ್ತ ಕಾರ್ಯಕ್ರಮ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಕಳೆದ ಇತ್ತಿಚೆಗೆ ನೆರವೇರಿತು.
ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರು ಈ ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡುವುದರ ಮೂಲಕ ಚಿತ್ರ ಹಾಗೂ ಧಾರಾವಾಹಿಯ ಚಿತ್ರೀಕರಣಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಜಗನ್ನಾಥದಾಸರು ಶ್ರೀ ರಾಘವೇಂದ್ರ ಶ್ರೀಗಳ ಅನುಯಾಯಿಗಳು. ಅವರ ಬಾಲ್ಯದ ಜೀವನ, ಯೌವ್ವನ ಹಾಗ ಆಧ್ಯಾತ್ಮಿಕ ಜೀವನದ ಕುರಿತಂತೆ ರಚಿಸಲಾಗಿರುವ ಕಥಾಸಾರವನ್ನು ಈ ಚಿತ್ರದ ಮೂಲಕ ನಿರ್ದೇಶಕ ಮಧುಸೂದನ್ ಅವರು ಹೇಳಹೊರಟಿದ್ದಾರೆ.
ಕಳೆದ 25 ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಮಧುಸೂದನ್ ಹವಾಲ್ದಾರ್ ಆರಂಭದಲ್ಲಿ ಟಿಎನ್ ಸೀತಾರಾಂ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ನಂತರ ಕೆಲವು ತೆಲುಗು ಚಿತ್ರಗಳನ್ನು ನಿರ್ದೇಶಿಸಿದ್ದರಲ್ಲದೆ, ಕೆಲ ಕಿರುಚಿತ್ರಗಳನ್ನೂ ಸಹ ನಿರ್ದೇಶಿಸಿದ್ದಾರೆ. ಕನ್ನಡದಲ್ಲಿ ಇದು ಅವರ ಮೊದಲಚಿತ್ರ.
ಹರಿಕಥಾಮೃತಸಾರದಂಥ ಉತ್ಕೃಷ್ಟ ಕಾವ್ಯವನ್ನು ಜಗತ್ತಿಗೆ ನೀಡಿದಂಥ ಜಗನ್ನಾಥದಾಸರ ಕುರಿತಾದ ಈ ಕಥೆಯನ್ನು ಚಲನಚಿತ್ರ ಹಾಗೂ ಕಿರುತೆರೆ ಧಾರಾವಾಹಿ ರೂಪದಲ್ಲೂ ಸಹ ತರಬೇಕೆಂಬ ಉದ್ದೇಶ ಇಟ್ಟುಕೊಂಡು ಈ ಎರಡೂ ಪ್ರಕ್ರಿಯೆಗಳಿಗೆ ಚಾಲನೆ ನೀಡಿದ ಶ್ರೀ ಸುಬುಧೇಂದ್ರ ತೀರ್ಥರು ಚಿತ್ರತಂಡಕ್ಕೆ ಹಾಗೂ ಕಲಾವಿದರಿಗೆ ಶುಭಾಶೀರ್ವಾದ ನೀಡಿದರು.
PublicNext
23/01/2021 11:30 am