ಬೆಂಗಳೂರು: ಕಿರುತೆರೆ ನಟ, ಬಿಗ್‍ಬಾಸ್ ವಿನ್ನರ್ ಶೈನ್ ಶೆಟ್ಟಿ ಬಿಗ್‍ಬಾಸ್ ಮನೆಗೆ ಹೋಗಿ ಬಂದ ನಂತರ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ, ಇದೀಗ ಶೈನ್ ಶೆಟ್ಟಿ ಶೇರ್ ಮಾಡಿರುವ ವಿಡಿಯೋ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಹೌದು, ಬಿಗ್‍ಬಾಸ್ ವಿನ್ನರ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಶೈನ್ ಒಂದು ಕಾಫಿ ಶಾಪ್‍ನಲ್ಲಿ ಕುಳಿತಿದ್ದು, ಟೇಬಲ್ ಮೇಲೆ ಒಂದು ಕಪ್ ಕಾಫಿ ಮತ್ತು ಒಂದು ಪುಸ್ತಕ ಇರುವುದನ್ನು ಕಾಣಬಹುದಾಗಿದೆ. ಜೊತೆಗೆ ಶೈನ್ ಎದುರು ಯಾವುದೋ ಹುಡುಗಿ ಕುಳಿತಿದ್ದಾರೆ. ಆದರೆ ವಿಡಿಯೋದಲ್ಲಿ ಹುಡುಗಿ ಯಾರೆಂಬುದು ಕಾಣಿಸುವುದಿಲ್ಲ.
ಅಲ್ಲದೇ ಶೈನ್ ತಮ್ಮ ಎದುರು ಕುಳಿತಿರುವ ಹುಡುಗಿಯ ಮುಂದೆ ಕೈ ಚಾಚಿದ್ದಾರೆ. ಆಗ ಆ ಹುಡುಗಿಯ ಶೈನ್ ಶೆಟ್ಟಿಗೆ ತಮ್ಮ ಕೈಯನ್ನು ಕೊಟ್ಟಿದ್ದಾರೆ. ನಂತರ ಶೈನ್ ಹುಡುಗಿಯ ಕೈ ಹಿಡಿದು ಆಕೆಯನ್ನೇ ನೋಡುತ್ತಿರುವುದನ್ನು ಕಾಣಬಹುದು. ರೊಮ್ಯಾಂಟಿಕ್ ವಿಡಿಯೋವನ್ನು ಪೋಸ್ಟ್ ಮಾಡಿ, “ಹಳೆ ಪುಸ್ತಕ, ಹೊಸ ನವಿಲುಗರಿ” ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಇದರ ಬಗ್ಗೆ ಒಂದು ವಿಶೇಷತೆ ಇದೆ. ಇದಕ್ಕಾಗಿ ಕಾಯಿರಿ ಎಂದು ಹೇಳಿದ್ದಾರೆ.
ಶೈನ್ ವಿಡಿಯೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಆ ಹುಡುಗಿ ಶೈನ್ ಶೆಟ್ಟಿ ಮದುವೆಯಾಗುತ್ತಿರುವ ಹುಡುಗಿ ಇರಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಶೈನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದು, ತಮಗೆ ಪರಿಚಯ ಇರುವ ಹುಡುಗಿಯನ್ನೇ ವಿವಾಹವಾಗುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಶೈನ್ ಅಧಿಕೃತವಾಗಿ ತಮ್ಮ ಮದುವೆ ಮತ್ತು ಆ ಹುಡುಗಿಯ ಬಗ್ಗೆ ರಿವೀಲ್ ಮಾಡಿಲ್ಲ.
ಅಭಿಮಾನಿಗಳು ಶೈನ್ ಶೆಟ್ಟಿ ಯಾವಾಗ ಹುಡುಗಿಯನ್ನು ಪರಿಚಯಿಸುತ್ತಾರೆ, ಆ ಹುಡುಗಿ ಯಾರು ಎಂದು ಕಾತುರದಿಂದ ಕಾಯುತ್ತಿದ್ದಾರೆ. ಕೆಲವರು ದೀಪಿಕಾ ದಾಸ್ ಎಂತಲೂ ಕಮೆಂಟ್ ಮಾಡಿದ್ದಾರೆ. ಯಾಕೆಂದರೆ ಬಿಗ್‍ಬಾಸ್ ಮನೆಯಲ್ಲಿದ್ದಾಗ ಶೈನ್ ಶೆಟ್ಟಿ ಮತ್ತು ದೀಪಿಕಾ ದಾಸ್ ಇಬ್ಬರ ಮಧ್ಯೆ ಪ್ರೇಮವಿದೆ ಎಂಬ ಚರ್ಚೆ ಆಗಿತ್ತು.
ಮತ್ತೆ ಕೊರೊನಾ ಲಾಕ್‍ಡೌನ್‍ನಿಂದ ಗಲ್ಲಿ ಕಿಚನ್ ಅನ್ನು ಕ್ಲೋಸ್ ಮಾಡಲಾಗಿತ್ತು. ಲಾಕ್‍ಡೌನ್ ಸಡಿಲಿಕೆ ಆದ ಮೇಲೂ ಜನರ ಆರೋಗ್ಯ ದೃಷ್ಟಿಯಿಂದ ಇನ್ನೂ ಕೆಲವು ದಿನ ಫುಡ್ ಟ್ರಕ್ ಓಪನ್ ಮಾಡುವುದಿಲ್ಲ ಎಂದು ಶೈನ್ ಶೆಟ್ಟಿ ತಿಳಿಸಿದ್ದರು. ಇದೀಗ ಮತ್ತೆ ‘ಗಲ್ಲಿ ಕಿಚನ್’ ಫುಡ್ ಟ್ರಕ್ ಆರಂಭಿಸಿದ್ದಾರೆ. ಸದ್ಯಕ್ಕೆ ಶೈನ್ ಶೆಟ್ಟಿ ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಹುನಿರೀಕ್ಷೆಯ ‘ರುದ್ರ ಪ್ರಯಾಗ’ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
PublicNext
23/09/2020 10:59 pm