ಬಾಲಿವುಡ್ ಜನಪ್ರಿಯ ಜೋಡಿ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ಮಗ ತೈಮೂರ್ ಅಲಿ ಖಾನ್ ಪಟೌಡಿ ವಿರುದ್ಧ ಕೆಲ ಧರ್ಮಾಂಧರು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ತಿರುಗಿ ಬಿದ್ದಿದ್ದಾರೆ.
ತೈಮೂರ್ ಬೆನ್ನುಹತ್ತುವ ಕೆಲವರು ಆತನ ಪ್ರತಿಯೊಂದು ನಡೆಯ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಲೇ ಇರುತ್ತಾರೆ. ಏನು ತಿಳಿಯದ ಮುಗ್ಧ ಬಾಲಕ ತನ್ನ ತುಂಟ ನಡವಳಿಕೆಗಳಿಂದ ಧರ್ಮಾಂಧರ ಪಾಲಿಗೆ ಆಗಾಗ ತುತ್ತಾಗಿ ಹೀನವಾದ ಮಾತುಗಳನ್ನು ಕೇಳುತ್ತಲೇ ಬಂದಿದ್ದಾನೆ.
ಎಲ್ಲಾ ಸಾಮಾನ್ಯ ಮಕ್ಕಳಂತೆ ತೈಮೂರ್ ಸಹ ಆಟಿಕೆಯ ಬಂದೂಕು ಹಿಡಿದುಕೊಂಡು ಪೋಸ್ ನೀಡಿದ್ದಾರೆ ಎನ್ನುವುದನ್ನು ಮರೆತಿರುವ ಧರ್ಮಾಂಧರು ಪುಟ್ಟ ಬಾಲಕನನ್ನು ಭಯೋತ್ಪಾದಕನಿಗೆ ಹೋಲಿಕೆ ಮಾಡಿದ್ದಾರೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 'ಬಾಲ ಜಿಹಾದ್' ಎಂದು ಕರೆದಿದ್ದಾರೆ. ಅಲ್ಲದೆ ದೊಡ್ಡವನಾದ ಮೇಲೆ ಇವನು ಭಯೋತ್ಪಾದಕನೇ ಆಗಬೇಕಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ತೈಮೂರ್ ವಿರುದ್ಧ ಕಮೆಂಟ್ ಮಾಡುತ್ತಿರುವವರಿಗೆ ಕೆಲವರು ಚಳಿ ಬಿಸಿದ್ದಾರೆ. ತೈಮೂರ್ ಇನ್ನು ಮಗು ಅವನನ್ನು ಅವನ ಪಾಡಿಗೆ ಬಿಟ್ಟುಬಿಡಿ. ಮಗುವಾಗಿದ್ದಾಗ ಎಲ್ಲರ ಬಳಿ ಆಟಿಕೆ ಬಂದೂಕುಗಳು ಇರಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಮಗುವನ್ನು ಭಯೋತ್ಪಾದಕ ಎಂದಿದ್ದಕ್ಕೆ ಹಲವರು ಅಸಮಾಧಾನ ಹೊರಹಾಕಿದ್ದಾರೆ.
PublicNext
24/01/2022 08:02 am