ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂತಾರಾಷ್ಟ್ರೀಯ ಚಿತ್ರೋತ್ಸವ ಸ್ಪರ್ಧೆಗೆ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಸಿನಿಮಾ ಆಯ್ಕೆ

ಖ್ಯಾತ ನಿರ್ಮಾಪಕ ಎಸ್.ವಿ. ಶಿವಕುಮಾರ್ ಅವರ ಸಂಗಮ ಫಿಲಂಸ್ ಲಾಂಛನದಲ್ಲಿ ಗಿರೀಶ್‌ ಕಾಸರವಳ್ಳಿ ನಿರ್ದೇಶನದಲ್ಲಿ ತಯಾರಿಸಿದ ಚಿತ್ರ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ'. ಈ ಚಿತ್ರವು ಎರಡು ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಸ್ಪರ್ಧಾತ್ಮಕ ವಿಭಾಗಗಳಿಗೆ ಆಯ್ಕೆಯಾಗಿದೆ.

2021ರ ಜನವರಿ 16ರಂದು ಢಾಕಾದಲ್ಲಿ ನಡೆಯಲಿರುವ ಏಷ್ಯನ್ ಚಿತ್ರೋತ್ಸವದಲ್ಲಿ ಭಾರತದ ಪ್ರತಿನಿಧಿಯಾಗಿ ಸಿನಿಮಾ ಭಾಗಿಯಾಗಲಿದೆ. ಜನವರಿ ತಿಂಗಳಲ್ಲಿ ರೋಮ್‌ ದೇಶದಲ್ಲಿ ನಡೆಯಲಿರುವ ಏಷ್ಯಾಟಿಕಾ ಚಲನ ಚಿತ್ರೋತ್ಸವದಲ್ಲಿ ಕೂಡ ಈ ಚಿತ್ರ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿದೆ.

‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಬಹುಮುಖ ಪ್ರತಿಭೆಯ ಕವಿ, ಸಾಹಿತಿ, ನಾಟಕಕಾರ, ಜನಪ್ರಿಯ ಗೀತೆ ರಚನಾಕಾರ ಜಯಂತ ಕಾಯ್ಕಿಣಿ ಅವರ ‘ಹಾಲಿನ ಮೀಸೆ’ ಕಥೆಯನ್ನು ಆಧರಿಸಿದ್ದು. ಆ ಕಥೆಯಲ್ಲಿ ಬರುವ ಪಾತ್ರವೊಂದನ್ನು ಬೆಳೆಸಿ ಸಮಕಾಲೀನ ಸಾಮಾಜಿಕ ಜ್ವಲಂತ ದ್ವಂದ್ವವನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ.

ದಾಸ ಶ್ರೇಷ್ಠ ಪುರಂದರದಾಸರ ಹಾಡೊಂದರ ಶೀರ್ಷಿಕೆ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಈ ದ್ವಂದ್ವವನ್ನು ಅತ್ಯಂತ ಮಾರ್ಮಿಕವಾಗಿ ಸೂಚಿಸುತ್ತದೆ. ಸುಖವನ್ನು ಅರಸುತ್ತಾ ಹೋಗುವ ಈ ಕಾಲದ ನಮ್ಮ ಪಯಣ ಮನಶ್ಶಾಂತಿಗೆ ನೆರವಾಗುವುದೆ ಎನ್ನುವ ಈ ದಾಸರ ಪದದಲ್ಲಿ ವ್ಯಕ್ತವಾಗುವ ಆತಂಕವೂ ಚಿತ್ರದ ಸತ್ವವಾಗಿದೆ.

ಬಾಲ್ಯದ ಹಳ್ಳಿಯ ಪರಿಸರದಲ್ಲಿ ತನ್ನ ಬೆಳವಣಿಗೆಗೆ ತೊಡಕಾಗಿದೆ ಎಂದು ಭಾವಿಸುವ ನಾಗರಾಜ ಸ್ಥಳಾಂತರ ಆಗುವ ಕನಸು ಸಾಕಾರಕ್ಕಾಗಿ ಹಳ್ಳಿಯಲ್ಲಿ ಬೆಳೆದು ದೊಡ್ಡವನಾಗಿ ನಗರ ಸೇರಿ ನಗರದೊಳಗೆ ಗೃಹಸ್ಥನಾಗಿ ನಾಗರಾಜ ಜೀವನದಲ್ಲಿ ಯಶಸ್ವಿಯಾದಂತೆ ಭವ ಜೀವನದ ಆಕರ್ಷಣೆ ಅವನನ್ನು ಬೇರೆಯೇ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಬಾಲ್ಯದಲ್ಲಿ ಅವನು ಅನುಭವಿಸಿದ ಅವಮಾನ ನೋವು ಅವನ ಮನಸ್ಸನ್ನು ಹದಗೊಳಿಸಿತೇ? ಅಥವಾ ಅದು ಅವನನ್ನು ಸೂಕ್ಷ್ಮ ಮಾಡಿತೇ ? ಎರಡು ಕಾಲ ಘಟ್ಟದಲ್ಲಿ ನಡೆಯುವ ಕಥೆಯೆ ಇದಾಗಿದೆ.

2010 ರಲ್ಲಿ ತೆರೆಕಂಡ ಬಸಂತ ಕುಮಾರ್ ಪಾಟೀಲ್ ನಿರ್ಮಿಸಿದ ‘ಕೂರ್ಮಾವತಾರ’ ಚಿತ್ರದ ನಂತರ ಸಾಕ್ಷ್ಯಚಿತ್ರಗಳ ನಿರ್ಮಾಣದತ್ತ ತೆರಳಿದ್ದ ಗಿರೀಶ ಕಾಸರವಳ್ಳಿ ಅವರು ಹತ್ತು ವರ್ಷಗಳ ನಂತರ ಪುನಹ ಕಥಾ ಚಿತ್ರ ನಿರ್ದೇಶಿಸಿದ್ದು, ಈ ಸಿನಿಮಾ ಅವರ 15ನೇ ಕಥಾ ಚಿತ್ರ ಆಗಿರಲಿದೆ.

Edited By : Vijay Kumar
PublicNext

PublicNext

21/12/2020 07:00 pm

Cinque Terre

53.61 K

Cinque Terre

0