ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಬಯೋಪಿಕ್ ಬರುತ್ತೆ ಎನ್ನುವ ಸುದ್ದಿ ಹಲವು ದಿನಗಳಿಂದ ಸದ್ದು ಮಾಡುತ್ತಿದೆ ಆದರೆ ಕಾರಣಾಂತರಗಳಿಂದ ಸಿನಿಮಾ ಪ್ರಾರಂಭವಾಗಿರಲಿಲ್ಲ. ಇದೀಗ ರೈ ಜೀವನಾಧಾರಿತ ಚಿತ್ರಕ್ಕೆ ಕಾಲಕೂಡಿಬಂದಿದೆ. ಇತ್ತೀಚಿಗಷ್ಟೆ ಮುತ್ತಪ್ಪ ರೈ ಜೀವನಾಧಾರಿತ ಸಿನಿಮಾಗೆ ಮುಹೂರ್ತ ನೆರವೇರಿದೆ. ಅಂದಹಾಗೆ ರೈ ಬಯೋಪಿಕ್ ಮಾಡುವ ಧೈರ್ಯ ಮಾಡಿದ್ದಾರೆ ನಿರ್ದೇಶಕ ರವಿ ಶ್ರೀವತ್ಸ. ಚಿತ್ರಕ್ಕೆ ಎಂ ಆರ್ ಟೈಟಲ್ ಫಿಕ್ಸ್ ಆಗಿದ್ದು, ಸೌಭಾಗ್ಯ ಲಕ್ಷ್ಮೀ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಡೆಡ್ಲಿಸೋಮ ಚಿತ್ರದ ನಿರ್ಮಾಪಕ ಶುಭ ರಾಜಣ್ಣ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ವಿಶೇಷ ಎಂದರೆ ನಿರ್ಮಾಪಕರ ಮಗ ದೀಕ್ಷಿತ್, ಮುತ್ತಪ್ಪ ರೈ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗೆ ಚಿತ್ರದ ಫೋಟೋಶೂಟ್ ಮಾಡಿಸುವ ಜೊತೆಗೆ ನಾಯಕನ ಪರಿಚಯ ಕೂಡ ಮಾಡಿಸಲಾಗಿದೆ.
ಎಂಆರ್ ಸಿನಿಮಾ 3 ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗದ ಚಿತ್ರೀಕರಣ ಜನವರಿಯಿಂದ ಪ್ರಾರಂಭವಾಗಲಿದ್ದು, ಆಗಸ್ಟ್ ಅಥವಾ ಸೆಪ್ಟಂಬರ್ ನಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ. ಮುತ್ತಪ್ಪ ರೈ ಬಯೋಪಿಕ್ ಮಾಡಬೇಕು ಎನ್ನುವ ಪ್ರಯತ್ನ ಹಲವು ವರ್ಷಗಳ ಹಿಂದೆಯೇ ನಡೆದಿತ್ತು. ಸುದೀಪ್ ನಟನೆಯಲ್ಲಿ ಅಪ್ಪ ಎನ್ನುವ ಹೆಸರಿನಲ್ಲಿ ಸಿನಿಮಾ ಅನೌನ್ಸ ಆಗಿತ್ತು. ಬಳಿಕ ಸುದೀಪ್ ಬದಲಿಗೆ ವಿವೇಕ್ ಒಬೆರಾಯ್ ಆಯ್ಕೆಯಾಗಿದ್ದರು ಆದರೆ ಸಿನಿಮಾ ಪ್ರಾರಂಭದಲ್ಲೇ ನಿಂತುಹೋಗಿತ್ತು.
ಇದೀಗ ನಿರ್ದೇಶಕ ರವಿ ಶ್ರೀವತ್ಸ ರೈ ಬಯೋಪಿಕ್ ಮಾಡಲು ನಿರ್ಧರಿಸಿ, ಮುಹೂರ್ತ ಕೂಡ ಮಾಡಿದ್ದಾರೆ. ಮುತ್ತಪ್ಪ ರೈ ಬಗ್ಗೆ ಸಿನಿಮಾ ಮಾಡಬೇಕು ಎನ್ನುವುದು ರವಿ ಶ್ರೀವತ್ಸ ಅವರ 20 ವರ್ಷದ ಕನಸಂತೆ. ಈ ಬಗ್ಗೆ ಮುತ್ತಪ್ಪ ರೈ ಅವರಿಗೆ ಕೆಲವು ವರ್ಷಗಳ ಹಿಂದೆಯೇ ಹೇಳಿದ್ದರಂತೆ, ರೈ ಕೂಡ ಮೆಚ್ಚಿಕೊಂಡಿದ್ದರು ಎನ್ನುತ್ತಾರೆ ರವಿ ಶ್ರೀವಾತ್ಸ.
PublicNext
28/11/2020 04:14 pm