ನವದೆಹಲಿ: ಇದೇ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆ ಮಟ್ಟದಲ್ಲಿ ಕುಸಿತವಾಗಿದೆ.
ಡಾಲರ್ ಗೆ ರೂಪಾಯಿ ಮೌಲ್ಯ ಇದೇ ಮೊದಲ ಬಾರಿಗೆ 80 ರೂ. ಮುಟ್ಟಿದೆ. ಸೋಮವಾರ ವಿದೇಶಿ ವಿನಿಮಯ ಮಾರುಕಟ್ಟೆಯು 79.76 ರೂಪಾಯಿ ಮೂಲಕ ವಹಿವಾಟು ಆರಂಭಿಸಿ, ಮಧ್ಯಂತರದಲ್ಲಿ 80 ರೂ. ಗಡಿ ದಾಟಿತು. ಕಡೆಗೆ ಕೊಂಚ ಚೇತರಿಸಿಕೊಂಡು 16 ಪೈಸೆ ಇಳಿಕೆ ಆಗಿ ದಿನ ಅಂತ್ಯಕ್ಕೆ 79.98 ರೂ.ಗೆ ವಿನಿಮಯ ದರ ಸ್ಥಿರಗೊಂಡಿತು.
ಇದೀಗ ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಶೇ.0.03 ಕುಸಿತದೊಂದಿಗೆ ಮತ್ತೆ 80.02 ರೂ. ಗಡಿ ದಾಟಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರದ ಏರಿಳಿತದಿಂದ ವಿದೇಶಿ ಹೂಡಿಕೆದಾರರು ಷೇರುಪೇಟೆಯಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ರೂಪಾಯಿ ಅಧಃಪತನ ಮುಂದುವರಿದು ಈ ವರ್ಷದಲ್ಲಿ ಈವರೆಗೆ ಶೇ. 8ರಷ್ಟು ಕುಸಿತ ಕಂಡಿದೆ.
PublicNext
19/07/2022 11:27 am