ನ್ಯೂಯಾರ್ಕ್: ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕ ಮತ್ತು ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಬಿಲ್ ಗೇಟ್ಸ್ ಅವರು ತಮ್ಮ ಪತ್ನಿ ಮೆಲಿಂಡಾ ಗೇಟ್ಸ್ ಅವರೊಂದಿಗೆ 27 ವರ್ಷಗಳ ದಾಂಪತ್ಯವನ್ನು ಮೇ 2021ರಲ್ಲಿ ಕೊನೆಗೊಳಿಸಿಕೊಂಡಿದ್ದಾರೆ. ಇದೀಗ ತಾವಿಬ್ಬರೂ ವಿಚ್ಛೇದನ ನೀಡಿದ್ದು ಯಾಕೆ ಎಂದು ಮೆಲಿಂಡಾ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.
ಮೆಲಿಂಡಾ ಗೇಟ್ಸ್ ಅವರು ಸಿಬಿಎಸ್ ನ್ಯೂಸ್‌ನ ಬೆಳಗಿನ ಶೋ 'ಸಿಬಿಎಸ್ ಮಾರ್ನಿಂಗ್' ನಲ್ಲಿ ಗೇಲ್ ಕಿಂಗ್‌ಗೆ ಸಂದರ್ಶನವನ್ನು ನೀಡಿದ್ದಾರೆ. ಇದರಲ್ಲಿ ಮೆಲಿಂಡಾ ಅವರು, 2019ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಕ್ಕಳ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ನನ್ನು ಆಗಾಗ ಭೇಟಿ ಮಾಡುತ್ತಿದ್ದಕ್ಕಾಗಿ ಪತಿ ಬಿಲ್ ಗೇಟ್ಸ್ ಅವರನ್ನು ಟೀಕಿಸಿದ್ದಾರೆ. ಜೊತೆಗೆ ತಾವು ಕೂಡ ಒಮ್ಮೆ ಜೆಫ್ರಿ ಎಪ್ಸ್ಟೀನ್ನನ್ನು ಭೇಟಿಯಾಗಿದ್ದಾಗಿ ಮತ್ತು ಭೇಟಿಯ ನಂತರ ದುಸ್ವಪ್ನಗಳನ್ನು ಎದುರಿಸಿದ್ದಾಗಿ ಇದೇ ಸಂದರ್ಭದಲ್ಲಿ ಮೆಲಿಂಡಾ ಒಪ್ಪಿಕೊಂಡರು.
ಬಿಲ್ ಗೇಟ್ಸ್ ಅವರ ವಿವಾಹೇತರ ಸಂಬಂಧದ ಬಗ್ಗೆ ಮೆಲಿಂಡಾ ಗೇಟ್ಸ್ ಅವರು, 'ನಾನು ಖಂಡಿತವಾಗಿಯೂ ಅವರನ್ನು ಕ್ಷಮಿಸುವುದರಲ್ಲಿ ನಂಬಿಕೆ ಹೊಂದಿದ್ದೇನೆ. ಹಾಗಾಗಿ ನಾವು ನಮ್ಮ ಸಂಬಂಧವನ್ನು ಮತ್ತೆ ಮೊದಲಿನಂತೆ ನಿಭಾಯಿಸುತ್ತೇವೆ ಎಂದು ಭಾವಿಸಿದ್ದೆ. ಆದರೆ ಅದು ಹಾಗಾಗಲಿಲ್ಲ' ಎಂದಿದ್ದಾರೆ.
'ನಾವು ವಿಚ್ಛೇದನ ನೀಡಲು ಇದು ಒಂದೇ ಕಾರಣ ಆಗಿರಲಿಲ್ಲ. ನಮ್ಮ ಸಂಬಂಧದಲ್ಲಿ ಏನೂ ಉಳಿದಿರಲಿಲ್ಲ ಮತ್ತು ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ನನಗೆ ಅರಿವಾಗುವ ಸಮಯ ಬಂದೊದಗಿತ್ತು. ನಂತರ ನಮ್ಮಿಬ್ಬರ ನಡುವೆ ಏನಾಯಿತು ಎಂದು ನನಗೆ ನಂಬಲು ಸಹ ಸಾಧ್ಯವಾಗಲಿಲ್ಲ' ಎಂದು ತಿಳಿಸಿದ್ದಾರೆ.
PublicNext
05/03/2022 01:45 pm