ನವದೆಹಲಿ: ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾದೊಂದಿಗೆ (ಎಸ್‌ಪಿಎನ್‌ಐ) ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಸಂಸ್ಥೆ 'ಜೀ ಎಂಟರ್‌ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್' ವಿಲೀನವಾಗಲಿದೆ. ಈ ಬಗ್ಗೆ ಜೀ ಎಂಟರ್‌ಟೈನ್ಮೆಂಟ್ ಬುಧವಾರ ಮಾಹಿತಿ ನೀಡಿದೆ.
ಈ ವಿಲೀನ ಒಪ್ಪಂದದ ಪ್ರಕಾರ, ಜೀ ಸಂಸ್ಥೆಯ ಹೂಡಿಕೆದಾರರು ಶೇ 47.07ರಷ್ಟು ಷೇರುಗಳನ್ನು ಉಳಿಸಿಕೊಳ್ಳಲಿದ್ದಾರೆ ಹಾಗೂ ಉಳಿದ ಷೇರುಗಳು ಸೋನಿ ಇಂಡಿಯಾದ ಹೂಡಿಕೆದಾರರ ಒಡೆತನಕ್ಕೆ ಸಿಗಲಿವೆ. ಸೋನಿ 1.57 ಬಿಲಿಯನ್ ಡಾಲರ್ (ಸುಮಾರು ₹11,571 ಕೋಟಿ) ಹೂಡಿಕೆ ಮಾಡಲಿದೆ. ಉಭಯ ಸಂಸ್ಥೆಗಳು ಒಪ್ಪಂದ ಅಂತಿಮಗೊಳಿಸಲು 90 ದಿನಗಳ ಅವಧಿ ಇರುತ್ತದೆ. ವಿಲೀನಗೊಂಡ ಸಂಸ್ಥೆಯು ಭಾರತದ ಷೇರುಪೇಟೆಯಲ್ಲಿ ಸಾರ್ವಜನಿಕ ವಹಿವಾಟಿಗೆ ತೆರೆದುಕೊಳ್ಳಲಿದೆ ಹಾಗೂ ಪುನೀತ್ ಗೋಯೆಂಕಾ ಸಂಸ್ಥೆಯ ನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಆಗಿ ಉಳಿಯಲಿದ್ದಾರೆ.
ವಿಲೀನ ಪ್ರಕ್ರಿಯೆ ಸುದ್ದಿ ಹೊರ ಬರುತ್ತಿದ್ದಂತೆ ಜೀ ಎಂಟರ್‌ಟೈನ್ಮೆಂಟ್ ಷೇರು ಬೆಲೆ ಶೇ 21.76ರಷ್ಟು (55.65 ರೂಪಾಯಿ) ಏರಿಕೆಯಾಗಿ ₹ 311.35ರಲ್ಲಿ ವಹಿವಾಟು ನಡೆದಿದೆ.
PublicNext
22/09/2021 11:32 am