ಮುಂಬೈ: ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ ರೆಪೊ ದರದಲ್ಲಿ 40 ಮೂಲಾಂಶ ಹೆಚ್ಚಳ ಮಾಡಲಾಗಿದ್ದು, ಶೇ 4.40ಕ್ಕೆ ನಿಗದಿಪಡಿಸಲಾಗಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಘೋಷಿಸಿದರು.
ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಾಗತಿಕ ಆರ್ಥಿಕ ಅಸ್ಥಿರತೆ ನಡುವೆಯೂ ಭಾರತೀಯ ಆರ್ಥಿಕತೆ ಸ್ಥಿರವಾಗಿದೆ. ನಗದು ಮೀಸಲು ಅನುಪಾತವನ್ನು (ಕ್ಯಾಶ್ ರಿಸರ್ವ್ ರೇಷಿಯೊ) ಬೇಡಿಕೆಯ 50 ಮೂಲಾಂಶ ಹೆಚ್ಚಿಸಲಾಗಿದ್ದು, ಶೇ 4.5ಕ್ಕೆ ನಿಗದಿಪಡಿಸಲಾಗಿದೆ. ಇದು 2022ರ ಮೇ 21ರಿಂದ ಜಾರಿಗೆ ಬರಲಿದೆ ಎಂದೂ ಅವರು ಮಾಹಿತಿ ನೀಡಿದರು.
ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವರದಿಯನ್ನು ಉಲ್ಲೇಖಿಸಿದ ದಾಸ್, ಯುದ್ಧದ ಆರ್ಥಿಕ ಪರಿಣಾಮಗಳು ಎಲ್ಲ ಕಡೆ ಹರಡುತ್ತಿವೆ. ಸರಕು ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ಕೊರತೆ ಹಾಗೂ ಚಂಚಲತೆ ಹೆಚ್ಚಾಗುತ್ತಿದೆ. ವಿವೇಕಯುತ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಭಾರತವು ಸದ್ಯ ಆರ್ಥಿಕ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಿದೆ ಎಂದು ಹೇಳಿದರು.
PublicNext
04/05/2022 02:50 pm