ನವೆದೆಹಲಿ: 2020-21ರ ಅವಧಿಯಲ್ಲಿ ಕೋವಿಡ್ ಸಾಂಕ್ರಾಮಿಕ ತೀವ್ರಗೊಂಡಿದ್ದ ಸಮಯದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದ ಮೂಲಕ ಕೇಂದ್ರ ಸರ್ಕಾರ ಭರ್ಜರಿ 3.72 ಲಕ್ಷ ಕೋಟಿ ರು. ಆದಾಯ ಸಂಗ್ರಹಿಸಿದೆ.
ಕೇಂದ್ರ ಸರ್ಕಾರ ಪ್ರತಿ ಲೀ.ಪೆಟ್ರೋಲ್ ಮೇಲೆ 27.90 ರು. ಮತ್ತು ಡೀಸೆಲ್ ಮೇಲೆ 21.80 ರು.ನಷ್ಟು ಅಬಕಾರಿ ಸುಂಕ ವಿಧಿಸುತ್ತದೆ. ಆದರೆ ಅದು ತನ್ನ ಆದಾಯವನ್ನು ರಾಜ್ಯಗಳ ಜೊತೆ ಹಂಚಿಕೊಳ್ಳಲು, ತೈಲದ ಮೇಲಿನ ಮೂಲ ಸುಂಕವನ್ನು ಮಾತ್ರ ಪರಿಗಣಿಸುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಮೂಲ ಅಬಕಾರಿ ಸುಂಕ ಪ್ರತಿ ಲೀ.ಗೆ ಕೇವಲ 1.40 ರು.ನಷ್ಟುಮಾತ್ರ ಇರುವುದರಿಂದ ರಾಜ್ಯಗಳ ಜೊತೆಗೆ ಅದು ಹಂಚಿಕೊಳ್ಳುವ ಪ್ರಮಾಣವೂ ಕಡಿಮೆ. ಹೀಗಾಗಿ 3.72 ಲಕ್ಷ ಕೋಟಿ ರು.ನಲ್ಲಿ ಕೇವಲ 19972 ಕೋಟಿ ರು. ಮಾತ್ರ ರಾಜ್ಯಗಳಿಗೆ ಹಂಚಿಕೆಯಾಗಿದೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ದುಪ್ಪಟ್ಟು ಎಂದು ಸ್ವತಃ ಕೇಂದ್ರ ಸರ್ಕಾರದ ಅಂಕಿ ಅಂಶಗಳ ಮೂಲಕವೇ ತಿಳಿದು ಬಂದಿದೆ. ಮಂಗಳವಾರ ಈ ಕುರಿತು ರಾಜ್ಯಸಭೆಗೆ ಮಾಹಿತಿ ನೀಡಿರುವ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ‘2019-20ನೇ ಸಾಲಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದ ರೂಪದಲ್ಲಿ ಸರ್ಕಾರ 1.78 ಲಕ್ಷ ಕೋಟಿ ರು. ಸಂಗ್ರಹಿಸಿತ್ತು. 2020-21ರಲ್ಲಿ ಈ ಪ್ರಮಾಣ 3.74 ಲಕ್ಷ ಕೋಟಿ ರು.ಗೆ ಏರಿತ್ತು. ಈ ಪೈಕಿ ರಾಜ್ಯಗಳಿಗೆ ಅವುಗಳ ಪಾಲಿನ ಪ್ರಮಾಣವಾದ 19,972 ಕೋಟಿ ರು.ಗಳನ್ನು ಹಂಚಲಾಗಿದೆ ಎಂದು ತಿಳಿಸಿದ್ದಾರೆ.
PublicNext
01/12/2021 12:47 pm