ಬೀದರ್: ಪರಿಸರದಲ್ಲಿನ ಉಷ್ಣ ವಲಯ ಮತ್ತು ವಾಯು ಮಂಡಲದ ಎತ್ತರಗಳಲ್ಲಿ ಸ್ಥಳೀಯ ಹವಾಮಾನವನ್ನು ಮೇಲ್ವಿಚಾರಣೆ ಮಾಡಲು ಆಕಾಶಕ್ಕೆ ಹಾರಿಸಿದ ಸ್ಯಾಟಲೈಟ್ ಪೇಲೋಡ್ ಮತ್ತು ಏರ್ ಬಲೂನ್ ಶನಿವಾರ ಬೆಳಗಿನ ಜಾವ ತಾಲೂಕಿನ ಜಲಸಂಗಿ ಗ್ರಾಮದಲ್ಲಿ ಧರೆಗೆ ಉರುಳಿ ಬಿದ್ದಿದೆ.
ಹೈದರಾಬಾದ್‌ನ TIFR ಬಲೂನ್ ಕೇಂದ್ರದಿಂದ ಜನವರಿ 17ರಂದು ಉಡಾವಣೆ ಮಾಡಲಾಗಿತ್ತು. ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಹುಮಾನಾಬಾದ್ ತಾಲೂಕಿನ ಜಲಸಂಗಿ ಗ್ರಾಮದಲ್ಲಿ ಬಂದು ಬಿದ್ದಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿತ್ತು. ಆಕಾಶದಿಂದ ಧರೆಗೆ ಬರುತ್ತಿರುವುದನ್ನು ಕಂಡ ಕೆಲ ಜನರು ಭಯಭೀತರಾಗಿದ್ದರು. ಸದ್ಯ ಏರ್ ಬಲೂನ್ ಬೀಳುವುದರಿಂದ ಯಾವುದೇ ಅನಾಹುತ, ಹಾನಿ ಸಂಭವಿಸಿಲ್ಲ.
ಏರ್ ಬಲೂನ್ ವೈಶಿಷ್ಟ್ಯವೆಂದರೆ, ವಿವಿಧ ತಾಂತ್ರಿಕ ಅಂಶಗಳನ್ನು ಅಳವಡಿಸಿದ ಕಾರಣ ಹೈದರಾಬಾದ್ ಬಲೂನ್ ಕೇಂದ್ರದ ಅಧಿಕಾರಿಗಳು ಕೂಡ ಅದನ್ನು ಹಿಂಬಾಲಿಸಿಕೊಂಡು ಗ್ರಾಮಕ್ಕೆ ಬಂದಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ, ಬಲೂನ್ ಕುರಿತು ಮಾಹಿತಿ ನೀಡಿದರು. ಯಾರೂ ಕೂಡ ಭಯ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಇಂತಹ ಬಲೂನ್‌ಗಳನ್ನು ವರ್ಷದಲ್ಲಿ ಎರಡು ಋತುಗಳಲ್ಲಿ ಉಡಾಯಿಸಲಾಗುತ್ತದೆ. ಜನವರಿ- ಏಪ್ರಿಲ್ ಮತ್ತು ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಹಾರಿಸಿ ವಾತಾವರಣದ ಕುರಿತು ಪರೀಕ್ಷೆ ನಡೆಸುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
PublicNext
18/01/2025 09:44 pm