ಬೆಳಗಾವಿ: ವಾಲ್ಮೀಕಿ ಸಮುದಾಯ ಸೇರಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಕೊಡುವಲ್ಲಿ ಸುಳ್ಳು ಭರವಸೆ ನೀಡಿದ ಬಿಜೆಪಿ ಸರಕಾರದ ವಿರುದ್ಧ ಅ.9 ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಕಾರ ಮಾಡುವುದಕ್ಕೆ ಬಹಿಷ್ಕಾರ ಮಾಡಲಾಗಿದೆ ಎಂದು ಕರ್ನಾಟಕ ಸ್ವಾಭಿಮಾನಿ ಎಸ್ಸಿ, ಎಸ್ಟಿ ಸಂಘಟನೆ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ, ಬೆಳಗಾವಿ ಜಿಲ್ಲಾ ವಾಲ್ಮೀಕಿ ಹೋರಾಟ ಕ್ರಿಯಾ ಸಮಿತಿಯ ರಾಜಶೇಖರ ತಳವಾರ ತಿಳಿಸಿದರು.
ಶನಿವಾರ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ನ್ಯಾ.ನಾಗಮೋಹನ ದಾಸ ವರದಿಯನ್ನು ಸರಕಾರ ಜಾರಿಗೆ ತರಲು ಹಿಂದೇಟು ಹಾಕುತ್ತಿದೆ. ಅಲ್ಲದೇ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಹೆಚ್ಚಿನ ಮೀಸಲಾತಿ ನೀಡಲು ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಧರಣಿ ವೇಳೆ ಭರವಸೆ ನೀಡಿದ ಸರಕಾರ ಈಗ ಸರ್ವ ಪಕ್ಷಗಳ ಸಭೆ ಕರೆದು ತೀರ್ಮಾನ ಮಾಡಲಾಗುವುದು ಎಂದು ಕುಂಟು ನೆಪ ಹೇಳುತ್ತಿದ್ದಾರೆ. ಆದ್ದರಿಂದ ಅ.9 ರಂದು ಸರಕಾರದಿಂದ ಆಚರಣೆ ಮಾಡುವ ವಾಲ್ಮೀಕಿ ಜಯಂತಿಯನ್ನು ಬಹಿಷ್ಕರಿಸಿ ಬೆಂಗಳೂರಿನಲ್ಲಿ ಸ್ವಾಮೀಜಿ ನಡೆಸುತ್ತಿರುವ ಧರಣಿಯಲ್ಲಿ ಭಾಗಿಯಾಗಿ ಅಲ್ಲಿ ಆಚರಣೆ ಮಾಡುತ್ತೇವೆ ಎಂದರು.
ವಾಲ್ಮೀಕಿ ಪೀಠದ ಸ್ವಾಮೀಜಿ ಪ್ರಸನ್ನಾನಂದ ಅವರು ಕಳೆದ 200 ದಿನಗಳಿಂದ ವಾಲ್ಮೀಕಿ ಸಮುದಾಯ ಸೇರಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಹೆಚ್ಚಿನ ಮೀಸಲಾತಿ ಸಿಗಬೇಕೆಂದು ಧರಣಿ ನಡೆಸಿದ್ದಾರೆ. ಸರಕಾರ ಮಾತ್ರ ಇಲ್ಲಿಯವರೆಗೂ ಸ್ಪಂದಿಸಿಲ್ಲ ಎಂದರು. ಸಂಜಯ ನಾಯಕ, ಅಶೋಕ ನಾಯಕ, ಬಸವರಾಜ ದೊಡಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
PublicNext
24/09/2022 02:17 pm