ರಾಷ್ಟ್ರಾದ್ಯಂತ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿರುವುದು ಸ್ವಾಗತಾರ್ಹ. ಇದಕ್ಕಾಗಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲು ಕಾಗವಾಡ ಕ್ಷೇತ್ರಕ್ಕೆ ಆಗಮಿಸಿರುವ ಕಟೀಲ್ ಅವರು ಕೆಂಪವಾಡದ ಅತಿಥಿ ಗೃಹದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ರು. ದೇಶದೆಲ್ಲೆಡೆ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗುವ ಮೂಲಕ ಉಗ್ರರೊಂದಿಗೆ ನೇರ ಸಂಪರ್ಕ ಹೊಂದಿರುವ ಪಿಎಫ್ ಐ ಸಂಘಟನೆ ಸೇರಿದಂತೆ ಎಂಟು ಅಂಗ ಸಂಸ್ಥೆಗಳನ್ನು ನಿಷೇಧ ಮಾಡಿರುವುದು ರಾಷ್ಟ್ರದಲ್ಲಿ ಶಾಂತಿ ಕಾಪಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೂ ಸಹ ಪೂರಕ ದಾಖಲೆಗಳೊಂದಿಗೆ ದೇಶ ವಿರೋಧಿ ಕೃತ್ಯಗಳೊಂದಿಗೆ ಗುರುತಿಸಿಕೊಂಡಿರುವ ಪಿಎಫ್ಐ ಸಂಘಟನೆಯನ್ನು ನಿಷೇಧಿಸಲು ಸಿಎಂ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರ ಸಿದ್ಧವಾಗಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ತಿಳಿಸಿದರು.ದೇಶದಲ್ಲಿ ನಡೆದಿರುವ ಹತ್ತಾರು ಕೊಲೆಗಳ ಹಿಂದೆ ಈ ಸಂಸ್ಥೆಗಳ ಕೈವಾಡವಿರುವುದು ತನಿಖೆಗಳಿಂದ ಬಯಲಾಗಿದೆ. ಅಲ್ಲದೇ ಈ ರೀತಿಯ ಕಾರ್ಯಾಚರಣೆಗೆ ಆರೇಳು ವರ್ಷಗಳ ಅಧ್ಯಯನ ಮಾಡಿ ಖಡಕ್ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಹೀಗಾಗಿ ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರದಿಂದ ಈ ರೀತಿಯ ದೇಶ ವಿರೋಧಿ ಕೃತ್ಯಗಳಿಗೆ ಕಡಿವಾಣ ಹಾಕುವ ಕೆಲಸ ನಡೆಯುತ್ತಿದೆ ಎಂದ ಕಟೀಲ್ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಿರುವುದು ಅದೊಂದು ಧಾರ್ಮಿಕ ಸಂಸ್ಥೆ ಎಂಬ ಕಾರಣಕ್ಕಲ್ಲ. ಅಲ್ಲದೇ ರಾಜಕೀಯ ಪಕ್ಷವಿದೆ ಎಂಬ ಕಾರಣಕ್ಕಾಗಿಯೂ ಅಲ್ಲ ಬದಲಾಗಿ ಕೇಂದ್ರದ ತನಿಖಾ ತಂಡ ಎನ್ಐಎ ವರದಿ ಆಧರಿಸಿ ಈ ರೀತಿಯ ಗಟ್ಟಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
PublicNext
28/09/2022 12:48 pm