ಬೆಳಗಾವಿ: ಪಂಚಮಸಾಲಿ 2ಎ ಮೀಸಲಾತಿ ಬಗ್ಗೆ ಶುಕ್ರವಾರ ಮೂಡಲಗಿಯಲ್ಲಿ ಸರಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಹಾಗೂ ಹೋರಾಟದ ರೂಪರೇಷೆಗಳನ್ನು ಸಿದ್ದಪಡಿಸಿಸಲು ಮೀಸಲಾತಿ ಹೋರಾಟದ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪಿಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಆ ಸಂದರ್ಭದಲ್ಲಿ ಪಂಚಮಸಾಲಿ 2 ಎ ಮೀಸಲಾತಿಯ ಬಗ್ಗೆ ಸಿಎಂ ಸಿಹಿ ಸುದ್ದಿ ಕೊಡುತ್ತಾರೆ ಎನ್ನುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಂಚಮಸಾಲಿ ಮೀಸಲಾತಿ ಹೋರಾಟ ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಉಪವಾಸದ ಮೂಲಕ ಆರಂಭವಾಗಿ. ಸರಕಾರ ಮಾತು ತಪ್ಪಿದ ಹಿನ್ನೆಲೆಯಲ್ಲಿ ಬೃಹತ್ ಪಾದಯಾತ್ರೆ ನಡೆಸಿ ಸರಕಾರದ ಕಣ್ಣು ತೆರೆಸುವ ಕೆಲಸ ಮಾಡಿದ್ದೇವು ಎಂದರು.
ಬಿ.ಎಸ್.ಯಡಿಯೂರಪ್ಪ ನವರು ನೀಡಿದ ಮಾತನ್ನು ತಪ್ಪಿದರು. ಅದರಂತೆ ಮುಖ್ಯಮಂತ್ರಿ ಬೊಮ್ಮಾಯಿಯವರು ಮಾತು ತಪ್ಪಿದ ಹಿನ್ನೆಲೆಯಲ್ಲಿ ಶಿಗ್ಗಾವಿಯ ಅವರ ನಿವಾಸದ ಎದುರು ಧರಣಿ ನಡೆಸಿದೆವು. ಅಲ್ಲದೆ ನಮ್ಮ ಸಮುದಾಯದ ಬಸನಗೌಡ ಪಾಟೀಲ ಯತ್ನಾಳ ಸದನದಲ್ಲಿ ಮೀಸಲಾತಿಯ ಬಗ್ಗೆ ಧ್ವನಿ ಎತ್ತಿದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಸಮಾಜದ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದರು ಎಂದು ಅಸಮಾಧಾನ ಹೊರ ಹಾಕಿದರು.
ಆರ್.ಕೆ.ಪಾಟೀಲ, ಹಣಮಂತ ಕೊಂಗಾಲಿ, ರಾಜೇಂದ್ರ ಹರಕುಣಿ, ರುದ್ರಣ್ಣಾ ಚಂದರಗಿ, ಬಿ.ಐ.ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
PublicNext
06/10/2022 04:49 pm