ಅಥಣಿ: ಸುಮಾರು 06 ಕೋಟಿ ರೂ ವೆಚ್ಚದಲ್ಲಿ ಅಥಣಿ ಪಟ್ಟಣದ ಸಾಯಿ ಮಂದಿರದಿಂದ ಅಂಬೇಡ್ಕರ್ ವೃತ್ತದ ವರೆಗೆ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ. ರಸ್ತೆ ನಿರ್ಮಾಣ ನಿಯಮಗಳನ್ನು ಗಾಳಿಗೆ ತೂರಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಅಥಣಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಪ್ರಶಾಂತ ತೋಡಕರ ಅವರು ಆರೋಪಿಸಿದ್ದಾರೆ.
ಅವರು ಅಥಣಿ ಪಟ್ಟಣದ ನಿರ್ಮಾಣ ಹಂತದ ರಸ್ತೆ ಕಾಮಗಾರಿಯನ್ನು ತೋರಿಸಿ ಮಾಧ್ಯಮದವರ ಜೊತೆ ಮಾತನಾಡುತ್ತಾ ಸಂಭಂದಿಸಿದ ಅಭಿಯಂತರರು ಹಾಗೂ ನಿರ್ಮಾಣ ಮಾಡುವವರು ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣದಲ್ಲಿನ ಇಳಿಜಾರಿನ ಮಾನದಂಡಗಳಾದ ಗ್ರೆಡಿಯಂಟ್ ಅನುಪಾತಗಳನ್ನು ಉಲ್ಲಂಘಿಸಿದ್ದಾರೆ. ರಸ್ತೆಯ ಮೂಲ ಎಸ್ಟಿಮೇಟ್ ವಿರುದ್ಧ ಕಾಮಗಾರಿ ನಡೆಸಿದ್ದಾರೆ. ರಸ್ತೆಯ ಆಳ ಮತ್ತು ಎತ್ತರವನ್ನು ಬೇಕಾಬಿಟ್ಟಿಯಾಗಿ ಬದಲಾಯಿಸಿದ್ದಾರೆ. ಒಂದು ಕಡೆ ಚರಂಡಿಯನ್ನು ರಸ್ತೆಗಿಂತ ಎತ್ತರ ಮಾಡಿ ಇನ್ನೊಂದು ಕಡೆ ಚರಂಡಿಯನ್ನು ರಸ್ತೆಗಿಂತ ಇಳಿಜಾರು ಮಾಡಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ಸರ್ಕಾರ ಹಣ ಪೋಲಾಗುತ್ತಿದೆ. ಇದನ್ನ ನೋಡಿದರೆ ರಸ್ತೆಯ ನೀಲನಕ್ಷೆ ತಯಾರಿಸಿದ ಅಭಿಯಂತರ ಮೇಲೆ ಅನುಮಾನ ಬರುತ್ತಿದೆ.
ರಸ್ತೆಯ ಗ್ರೇಡಿಯೆಂಟ್ ಪ್ರಮಾಣದಲ್ಲಿನ ವ್ಯತ್ಯಾಸದಿಂದ ಇಳಿಜಾರಿನಲ್ಲಿ ಬರುವ ರೈತನ ಕಬ್ಬಿನ ವಾಹನಗಳಿಗೆ ತೊಂದರೆಯಾಗುತ್ತದೆ. ರಸ್ತೆಗೆ ಹೊಂದಿಕೊಂಡು ಶಾಲಾ-ಕಾಲೇಜು ಇರುವುದರಿಂದ ಅಪಘಾತವಾಗುವ ಸಂಭವ ಹಚ್ಚಾಗಿದೆ. ಒಟ್ಟಿನಲ್ಲಿ ಈ ರೀತಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕೂಡ ಯಾವುದೇ ಕ್ರಮವಾಗಿಲ್ಲ. ಕೂಡಲೇ ಮೇಲಾಧಿಕಾರಿಗಳು ಈ ಕಾಮಗಾರಿಯನ್ನು ನಿಲ್ಲಿಸಿ ಮೂಲ ಎಸ್ಟಿಮೇಟ್ ಪ್ರಕಾರವಾಗಿ ನಿರ್ಮಿಸಬೇಕು ಇಲ್ಲವಾದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
PublicNext
10/09/2022 03:17 pm