ಬೆಳಗಾವಿ: ಸಹಾಯ ಮಾಡುವ ನೆಪದಲ್ಲಿ ಮಹಿಳೆಯೊಬ್ಬರ ಎಟಿಎಂ ಪಾಸ್ ವರ್ಡ್ ಪಡೆದು ಅವರ ಬ್ಯಾಂಕ್ ಖಾತೆಯಿಂದ 37,500 ರೂ. ಎಗರಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲ್ಲಾಪುರ ಜಿಲ್ಲೆಯ ಹಾಥಕಣಗಲಾ ತಾಲೂಕಿನ ಸಾವರ್ಡೆ ನಿವಾಸಿ ಅಮೂಲ್ ದಿಲೀಪ್ ಸಖಟೆ (30) ಬಂಧಿತ ಆರೋಪಿ. ಈತ ಚಿಕ್ಕೋಡಿ ತಾಲೂಕಿನ ಹಾಲಟ್ಟಿ ಗ್ರಾಮದ ವಿಜಯಾ ರಾನಪ್ಪ ಢಾಲೆ ಎಂಬುವವರು ಸೆ.3ರಂದು ಎಟಿ ಎಂನಿಂದ ಹಣ ಪಡೆಯಲು ಹೋದಾಗ ಅವರಿಗೆ ಸಹಾಯ ಮಾಡುವ ನೆಪದಲ್ಲಿ 37,500 ರೂ. ವಿತ್ಡ್ರಾ ಮಾಡಿಕೊಂಡಿದ್ದ ಬಗ್ಗೆ ವಿಜಯಾ ಢಾಲೆ ಅವರು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿತನಿಂದ ಬೇರೆಬೇರೆ ಜನರಿಗೆ ಮೋಸ ಮಾಡಿ ಪಡೆದ ಎಟಿಎಂ ಕಾರ್ಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಅಥಣಿ, ಗೋಕಾಕ, ನಿಪ್ಪಾಣಿ, ಚಿಕ್ಕೋಡಿ, ಬಾಗಲಕೋಟ ಹಾಗೂ ಮಹಾರಾಷ್ಟ್ರ ರಾಜ್ಯದ ಹಲವೆಡೆಗಳಲ್ಲಿ ಇದೇ ರೀತಿ ಅಪರಾಧ ಎಸಗಿದ ಬಗ್ಗೆ ಕಂಡು ಬಂದಿದ್ದು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕ್ಕೋಡಿ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಸಿಪಿಐ ಆರ್.ಆರ್.ಪಾಟೀಲ, ಪಿಎಸ್ ಯಮನಪ್ಪ ಮಾಂಗ, ಸಿಬ್ಬಂದಿಗಳಾದ ಆರ್. ಎಲ್. ಶೀಳನವರ, ಎಂ.ಪಿ. ಸತ್ತಿಗೇರಿ, ಎಸ್.ಪಿ. ಗಲಗಲಿ ಆರೋಪಿ ಬಂಧನಕ್ಕೆ ಕಾರ್ಯಾಚರಿಸಿದ್ದರು. ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಸಂಜೀವ ಪಾಟೀಲ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
PublicNext
06/10/2022 10:58 am