ಬೆಳಗಾವಿ: ಹೆಂಡತಿ ಮತ್ತು ಮಕ್ಕಳ ಮನೆಯಲ್ಲಿ ಇರುವಾಗಲೇ ಪತಿಯ ಭೀಕರ ಕೊಲೆಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಕ್ಯಾಂಪ್ ಏರಿಯಾದಲ್ಲಿ ರಾತ್ರಿ ವೇಳೆ ಸುಧೀರ ಕಾಂಬಳೆ(57) ಎಂಬ ವ್ಯಕ್ತಿಯನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಶುಕ್ರವಾರ ಮಧ್ಯರಾತ್ರಿ ಘಟನೆ ನಡೆದಿದ್ದು ಹೆಂಡತಿ, ಮಕ್ಕಳು ಪಕ್ಕದ ರೂಮ್‌ನಲ್ಲಿ ಮಲಗಿದ್ದಾಗಲೇ ದುಷ್ಕರ್ಮಿಗಳು ಒಳನುಗ್ಗಿ ಸುಧೀರನ ಹೊಟ್ಟೆ, ಕೈ, ಬೆನ್ನು ಮತ್ತು ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರ.
ಕೊಲೆಯಾದ ಸುಧೀರ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ಮಾಡ್ತಿದ್ದ. ಕೋವಿಡ್ ಹಿನ್ನೆಲೆ ದುಬೈದಿಂದ ಎರಡು ವರ್ಷದ ಹಿಂದೆ ಬೆಳಗಾವಿಗೆ ಬಂದಿದ್ದ ಸುಧೀರ್ ನಗರದಲ್ಲಿ ರಿಯಲ್ ಎಸ್ಟೇಟ್ ಸೇರಿದಂತೆ ಹಲವು ವ್ಯವಹಾರಗಳನ್ನು ಮಾಡುತ್ತಿದ್ದ. ಆದರೆ ಪತ್ನಿ ಮತ್ತು ಮಕ್ಕಳು ಮನೆಯಲ್ಲಿ ಇದ್ದರೂ ತನ್ನ ಗಂಡನ ಕೊಲೆಯಾಗಿದ್ದು ಅವಳಿಗೆ ಗೊತ್ತೆ ಆಗದೆ ಇರುವುದು ಪೊಲೀಸರಲ್ಲಿ ಅನೇಕ ಅನುಮಾನಗಳನ್ನು ಹುಟ್ಟು ಹಾಕಿದೆ.
ಈಗಾಗಲೇ ಸ್ಥಳಕ್ಕೆ ಕ್ಯಾಂಪ್ ಪೊಲೀಸರು, ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಧ್ಯರಾತ್ರಿ ಕೊಲೆ ನಡೆದಿದೆ. ಕೊಲೆ ನಡೆದಾಗ ಪತ್ನಿ ಮಕ್ಕಳು ಸ್ಥಳದಲ್ಲಿ ಇದ್ದರು. ನಮ್ಮ ಫಾರೆನ್ಸಿಕ್ ವಿಭಾಗ ಹಾಗೂ ಪೊಲೀಸರು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ. ಇದಾದ ಬಳಿಕ ತನಿಖೆ ಮುಂದುವರಿಸಿ ಆರೋಪಿಗಳನ್ನು ಶೀಘ್ರದಲ್ಲೇ ಖೆಡ್ಡಾಗೆ ಕೆಡವುತ್ತೇವೆ ಎಂದು ಡಿಸಿಪಿ ಗಡಾದಿ ಹೇಳಿದ್ದಾರೆ.
PublicNext
17/09/2022 04:44 pm