ಬೆಂಗಳೂರು ದಕ್ಷಿಣ: ಜಾತ್ರೆ ಅಂದ್ರೆ ಸಾಕು ನಮ್ಮ ಕಣ್ಮುಂದೆ ಬರೋದು ರಥೋತ್ಸವ, ಕರಗ, ಪಲ್ಲಕ್ಕಿ. ಆದ್ರೆ, ಇಲ್ಲೊಂದು ಕಡೆ ಮಂಗಳಮುಖಿಯರಿಗೆಂದೇ ವಿಶಿಷ್ಟ ಜಾತ್ರೆ ನಡೆಯುತ್ತಿದ್ದು, ತಮ್ಮ ಆರಾಧ್ಯ ದೇವಿಗೆ ವರ್ಷಕ್ಕೊಂದು ಬಾರಿ ಜಾತ್ರೆ ನಡೆಸಿ ತಮ್ಮ ಹರಕೆ ತೀರಿಸುತ್ತಾರೆ. ಅಷ್ಟಕ್ಕೂ ಈ ವಿಶಿಷ್ಟ ಜಾತ್ರೆ ನಡೆಯೋದಾದ್ರು ಎಲ್ಲಿ ಅಂತೀರಾ? ನೋಡೋಣ ಬನ್ನಿ...
ಹೀಗೆ ಮೈತುಂಬಾ ಹರಿಶಿಣ ಬಳಿದುಕೊಂಡು ತಲೆ ತುಂಬಾ ಹೂ ಮುಡಿದು, ತಮಟೆ ಸದ್ದಿಗೆ ಹೆಜ್ಜೆ ಹಾಕುತ್ತಿರುವ ಮಂಗಳ ಮುಖಿಯರು... ತಮ್ಮ ನೆಚ್ಚಿನ ಆರಾಧ್ಯ ದೇವಿ ಬೇಗಳಮ್ಮನಿಗೆ ಹರಕೆ ಸಲ್ಲಿಸಲು ತೆರಳುತಿರುವ ಮಂಗಳಮುಖಿಯರ ಈ ದೃಶ್ಯ ಕಂಡು ಬಂದಿದ್ದು ಬೆಂಗಳೂರು ಬಳಿಯ ಬನ್ನೇರುಘಟ್ಟದಲ್ಲಿ.
ಹೌದು, ಪ್ರತಿವರ್ಷ ಮಾರ್ಚ್ ನಲ್ಲಿ ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ರಥೋತ್ಸವ ಹಾಗೂ ಬೇಗಳಮ್ಮ ಜಾತ್ರೆ ನಡೆಯುತ್ತದೆ. ಇದಕ್ಕೆ ಕರ್ನಾಟಕ ಸಹಿತ ತಮಿಳುನಾಡು, ಆಂಧ್ರಪ್ರದೇಶದಿಂದ ಮಂಗಳಮುಖಿಯರು ಬಂದು ತಮ್ಮ ಹರಕೆಯನ್ನು ಬೇಗಳಮ್ಮ ಹಾಗೂ ಚಂಪಕಧಾಮಸ್ವಾಮಿಗೆ ತೀರಿಸಿ ಹೋಗುವುದು ವಾಡಿಕೆ.
ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ದೇವಾಲಯ ಚೋಳರ ಕಾಲದಲ್ಲಿ ನಿರ್ಮಿಸಿದ್ದು, ಚಂಪಕಧಾಮ ಸ್ವಾಮಿ ಹಾಗೂ ಬೇಗಾಳಮ್ಮ ಅಣ್ಣ- ತಂಗಿಯರು. ಹೀಗಾಗಿ ಹರಕೆ ಹೊತ್ತವರು ಮೊದಲಿಗೆ ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ದರ್ಶನ ಪಡೆದು ಹೂವು ಕಟ್ಟಿಸಿಕೊಳ್ಳುತ್ತಾರೆ.
ನಂತರ ಬನ್ನೇರುಘಟ್ಟದಿಂದ 4 ಕಿ.ಮೀ. ದೂರದಲ್ಲಿರುವ ಬೇಗಳಮ್ಮ ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ತಮಟೆ ಸದ್ದಿಗೆ ಕುಣಿಯುತ್ತಾ ಸಾಗುತ್ತಾರೆ. ಇದನ್ನು ನೋಡಲು ಬೆಂಗಳೂರು ಹಾಗೂ ಸುತ್ತಮುತ್ತಲಿನ ಸಾವಿರಾರು ಭಕ್ತಾದಿಗಳು ಈ ವಿಶಿಷ್ಟ ಜಾತ್ರೆ ನೋಡಲು ಆಗಮಿಸುತ್ತಾರೆ. ಇಲ್ಲಿಗೆ ಬರುವ ಭಕ್ತರು ಸಹ ತಮ್ಮ ಇಷ್ಟಾರ್ಥ ಬಗ್ಗೆ ಹರಕೆ ಹೊತ್ತು ಹೋಗುತ್ತಾರೆ. ಮುಂದಿನ ವರ್ಷ ಜಾತ್ರೆಗೆ ಕುಟುಂಬ ಸಮೇತರಾಗಿ ಬಂದು ಹರಕೆ ತೀರಿಸುತ್ತಾರೆ.
ಹರೀಶ್ ಗೌತಮನಂದ, ʼಪಬ್ಲಿಕ್ ನೆಕ್ಸ್ಟ್ʼ ಆನೇಕಲ್
PublicNext
23/03/2022 10:56 pm