ಕೊನಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸದಸ್ಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ಸದಸ್ಯರ ಗಮನಕ್ಕೂ ತರದೇ ನಿರ್ದೇಶಕರನ್ನ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಒಂದೇ ಒಂದು ಸ್ಥಾನಕ್ಕಾಗಿ ಚುನಾವಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಂಘದಲ್ಲಿನ ಹಿಟ್ಲರ್ ಧೋರಣೆಯ ವಿರುದ್ಧ ಸದಸ್ಯರು ತಮಟೆ ಹೊಡೆದು ಪ್ರತಿಭಟನೆ ನಡೆಸಿದರು.
ಕೊನಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 166 ಸದಸ್ಯರಿದ್ದು, ಪ್ರತಿ ದಿನ ಸಂಘದಲ್ಲಿ 2 ಸಾವಿರಕ್ಕೂ ಹೆಚ್ಚು ಲೀಟರ್ ಹಾಲು ಸಂಗ್ರಹವಾಗುತ್ತೆ. ಸದಸ್ಯರ ಶ್ರಮದಿಂದ ಸಂಘ ಲಾಭದಲ್ಲಿ ನಡೆಯುತ್ತಿದೆ, ಆದರೆ ಸಂಘದಲ್ಲಿ ಕಳೆದ ಹದಿನೈದು ವರ್ಷಗಳಿಂದು ಬೇರು ಬಿಟ್ಟಿರುವ ನಿರ್ದೇಶಕರಿಂದ, ಹಾಲು ಉತ್ಪಾದಕರಿಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ ಎಂದು ಹಾಲು ಉತ್ಪಾದಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕೊನಘಟ್ಟ ಗ್ರಾಮದಲ್ಲಿ ಎಲ್ಲಾ ಸಮುದಾಯದ ಜನರಿದ್ದಾರೆ. ಆದರೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕೇವಲ ಎರಡು ಸಮುದಾಯಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸಂಘದಲ್ಲಿರುವ 13 ಸ್ಥಾನಗಳಲ್ಲಿ 6 ಒಕ್ಕಲಿಗರು ಮತ್ತು 5 ಸ್ಥಾನಗಳನ್ನ ತಿಗಳ ಸಮುದಾಯಕ್ಕೆ ನೀಡಲಾಗಿದೆ. 13 ಸ್ಥಾನಗಳಲ್ಲಿ ಈಗಾಗಲೇ 12 ಸ್ಥಾನ ಅವಿರೋಧವಾಗಿದ್ದು, SC ಸಮುದಾಯಕ್ಕೆ ಮೀಸಲಾದ ಒಂದು ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದೆ. ಮುನಿರಾಜು, ರಾಮಣ್ಣ, ನಂಜಪ್ಪ, ಮಂಜುನಾಥ್, ನಂಜುಂಡಗೌಡ ಕಳೆದ 15 ವರ್ಷಗಳಿಂದ ನಿರ್ದೇಶಕರಾಗಿ ಮುಂದುವರೆದಿದ್ದಾರೆ. ಇಡೀ ಸಂಘ ಇವರ ಹಿಡಿತದಲ್ಲಿದ್ದು, ಇವರ ಮಾತಿಗೆ ಮಣೆ ಹಾಕುವರನ್ನ ಮಾತ್ರ ನಿರ್ದೇಶಕರಾಗಿ ಅವಿರೋಧ ಆಯ್ಕೆ ಮಾಡಿದ್ದಾರೆ. ಬೋಗಸ್ ಸಹಿ ಹಾಕಿಕೊಂಡು ನಾಮಪತ್ರ ಹಿಂತೆಗೆದುಕೊಂಡು ತಮಗೆ ಬೇಕಾದವರಿಗೆ ಅವಕಾಶ ನೀಡಿದ್ದಾರೆ ಎಂದು ಮಾಡುತ್ತಿದ್ದಾರೆ.
ಏಕಪಕ್ಷೀಯವಾಗಿ ಆಯ್ಕೆಯಾದ ನಿರ್ದೇಶಕರ ಸ್ಥಾನವನ್ನ ವಜಾ ಮಾಡಬೇಕು. ನಾಳೆ ಕೇವಲ ಒಂದು ಸ್ಥಾನಕ್ಕಾಗಿ ನಡೆಯುವ ಚುನಾವಣೆ ರದ್ದು ಮಾಡಿ ಎಲ್ಲಾ ಸ್ಥಾನಕ್ಕೂ ಚುನಾವಣೆ ಮಾಡಿ ಹೊಸಬರಿಗೆ ಅವಕಾಶ ನೀಡಬೇಕೆಂದು ಚುನಾವಣಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.
PublicNext
13/08/2022 06:26 pm