ಬೆಂಗಳೂರು: ರಾಜಕಾರಣಿಗಳು, ವಿಐಪಿ, ವಿವಿಐಪಿ ಮಂದಿಗೆ ಗಂಟೆಗಟ್ಟಲೇ ರೋಡ್ ಬ್ಲಾಕ್ ಮಾಡಿ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆಗ ಟ್ರಾಫಿಕ್ ಸಮಸ್ಯೆ ಕಣ್ಣಿಗೆ ಕಾಣುವುದಿಲ್ಲ. ಆದರೆ ಸಾಮಾನ್ಯ ಜನರು, ಅದರಲ್ಲೂ ಬೈಕ್ ಸವಾರರು ಮಳೆ ಬಂದಾಗ ಅಂಡರ್ ಪಾಸ್‌ನಲ್ಲಿ ನಿಲ್ಲುವುದು ಖಾಕಿ ಕಣ್ಣಿಗೆ ನಾಟಿದೆ.
ಹೌದು. ಸಿಲಿಕಾನ್ ಸಿಟಿಯಲ್ಲಿ ಮಳೆ ಬಂದ್ರೆ ಸೃಷ್ಟಿಯಾಗೋ ಅವಾಂತರ ಒಂದೆರಡಲ್ಲ. ಈ ಅವಾಂತರಗಳ ನಡುವೆ ಸಂಚಾರ ವಿಭಾಗ ಜಂಟಿ ಆಯುಕ್ತ ರವಿಕಾಂತೇಗೌಡ ವಾಹನ ಸವಾರರಿಗೆ ಮತ್ತೊಂದು ಶಾಕ್ ನೀಡಿದ್ದಾರೆ. ಇನ್ಮುಂದೆ ಮಳೆ ಬರುವ ಸಂದರ್ಭದಲ್ಲಿ ಬ್ರಿಡ್ಜ್ ಗಳ ಅಥವಾ ಅಂಡರ್ ಪಾಸ್‌ಗಳಲ್ಲಿ ವಾಹನಗಳನ್ನು ನಿಲ್ಲಿಸಿದ್ರೆ ಪ್ರಕರಣ ದಾಖಲಿಸಿ ಫೈನ್ ಹಾಕೋ ಎಚ್ಚರಿಕೆ ನೀಡಿದ್ದಾರೆ.
ಅಂಡರ್ ಪಾಸ್‌ಗಳಲ್ಲಿ ವಾಹನ ನಿಲ್ಲಿಸಿದ್ರೆ ಅಪಘಾತ ಆಗೋ ಸಂದರ್ಭ ಇರುತ್ತದೆ. ಈಗಾಗಲೇ ನಗರದಲ್ಲಿ ಮೂರು ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆ ಈ ರೀತಿಯ ತೀರ್ಮಾನಕ್ಕೆ ಬಂದಿದ್ದಾರೆ. ಆದ್ರೆ ಮಳೆ ಬಂದಾಗ ಜನ ಎಲ್ಲಿ ನಿಲ್ಲಬೇಕು ಅಂತ ಜನ ಕೂಡ ಪ್ರಶ್ನೆ ಮಾಡ್ತಿದ್ದಾರೆ. ರಸ್ತೆಯಲ್ಲಿ ಗುಂಡಿ ಒಂದು ಕಡೆ ಮಳೆ ಬಂತು ಅಂತ ಹಾಗೇ ಬೈಕ್ ಚಲಾಯಿಸಿದ್ರೆ ರಸ್ತೆಗುಂಡಿಗೇ ಬೀಳೋ ಸಾಧ್ಯತೆಯಿದೆ ಹೆಚ್ಚು ಅಂತ ಜನ ಸಾಮಾಜಿಕ ಜಾಲತಾಣದಲ್ಲಿ ಹೇಳ್ತಿದ್ದಾರೆ.
"ದೆಹಲಿಯ ರಾಜಕೀಯ ನಾಯಕರು ಬಂದಾಗ ಗಂಟೆಗಟ್ಟಲೆ ಆ ರಸ್ತೆಯಲ್ಲಿ ಓಡಾಡಲು ಬಿಡೊಲ್ಲಾ. ಆದರೆ, ಮಳೆ ಬಂದಾಗ ಯಾರೋ ಒಂದಿಷ್ಟು ಜನ ಅಂಡರ್ ಪಾಸ್‌ನಲ್ಲಿ ನಿಂತರೆ ಆಗುವ ಒಂದಿಷ್ಟು ನಿಮಿಷಗಳ ಟ್ರಾಫಿಕ್ ಜಾಮ್ ಸರ್ಕಾರದ ತಲೆಕೆಡಿಸಿದೆ. ಹಾಗಾಗಿ ದಂಡ ಹಾಕ್ತಿರಬಹುದು. ಮಾನವೀಯತೆಯನ್ನು ಮರೆತವರಿಗೆ ಸರ್ಕಾರ ನಡೆಸಲು ಅವಕಾಶ ಸಿಕ್ಕಾಗ ಇವೆಲ್ಲಾ ಸಹಜವೇ" ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
01/09/2022 01:29 pm