ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಬದಿಯಲ್ಲಿ ಮುಸ್ಲಿಮರು ನಮಾಜ್ ಮಾಡಲು ಅವಕಾಶ ಇಲ್ಲ. ಅದರಲ್ಲೂ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಆಗುವ ತಾಜ್ಯವನ್ನು ಬಿಬಿಎಂಪಿ ಸ್ವಚ್ಛಗೊಳಿಸಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜುಲೈ 10ಕ್ಕೆ ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗುವಂತೆ ಹಬ್ಬದ ಪ್ರಾರ್ಥನೆ ಮಾಡುವ ಹಾಗಿಲ್ಲ ಎಂದರು
ಹಬ್ಬದ ಪ್ರಾರ್ಥನೆಗೆ ರಸ್ತೆ ಬಂದ್ ಮಾಡುವುದು. ಟ್ರಾಫಿಕ್ ಸಿಗ್ನಲ್ ನಲ್ಲಿ ಚಾಪೆ ಹಾಸುವುದಕ್ಕೆ ಅವಕಾಶ ಇಲ್ಲ. ಪೊಲೀಸ್ ಇಲಾಖೆಯೊಂದಿಗೆ ಈ ಬಗ್ಗೆ ಮಾತನಾಡಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕಸ ವಿಲೇವಾರಿ ಇಲ್ಲ:ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಸಂಬಂಧ ಸದ್ಯಕ್ಕೆ ಈ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದಿಲ್ಲ. ಬಕ್ರೀದ್ ಹಬ್ಬದ ಹಿನ್ನೆಲೆ ಈ ಸ್ಥಳದಲ್ಲಿ ಜಾನುವಾರು ಮಾರಾಟ ಹೆಚ್ಚಾಗಿದೆ. ಇದರಿಂದ ತ್ಯಾಜ್ಯವು ಶೇಖರಣೆ ಆಗಿದ್ದು, ಸದ್ಯಕ್ಕೆ ಬಿಬಿಎಂಪಿ ತೆರವು ಮಾಡುವ ಕೆಲಸ ಮಾಡುವುದಿಲ್ಲ ಎಂದರು.
ಇನ್ನೂ, ಈದ್ಗಾ ಮೈದಾನದಲ್ಲಿ ಬಕ್ರೀದ್ ಪ್ರಾರ್ಥನೆಗೆ ಯಾವುದೇ ಅಡ್ಡಿಯಿಲ್ಲ. ಏಕೆಂದರೆ ಸುಪ್ರೀಂ ಕೋರ್ಟ್ ನಲ್ಲಿ ನಮಾಜ್ ಗೆ ಅನುಮತಿ ಇದೆ. ಹೀಗಾಗಿ ಮುಸ್ಲಿಂ ಜನಾಂಗದ ಹಬ್ಬದ ಪ್ರಾರ್ಥನೆಗೆ ಅಡ್ಡಿಯಿಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ಪ್ರಾರ್ಥನೆಗೆ ಅವಕಾಶ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಭಿಕ್ಷಾಟನೆ: ನಗರದ ಟ್ರಾಫಿಕ್ ಸಿಗ್ನಲ್ ನಲ್ಲಿ ಭಿಕ್ಷಾಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಬಿಬಿಎಂಪಿಯಿಂದ ನಗರದ ಹಲವೆಡೆಯಿಂದ 720 ಜನರನ್ನು ಭಿಕ್ಷಾಟನೆಯಿಂದ ರಕ್ಷಣೆ ಮಾಡಲಾಗಿದೆ. ಹಲವು ಸಂಘ ಸಂಸ್ಥೆಗಳಿಂದ ದೂರುಗಳು ಬಂದ ಹಿನ್ನೆಲೆ. ಪಾಲಿಕೆಯಿಂದ ವಿಶೇಷ ಕಾರ್ಯಾಚರಣೆ ಮಾಡಿ 720 ಜನರನ್ನು ರಕ್ಷಿಸಲಾಗಿದೆ.ಇನ್ನೂ, ನಗರದಲ್ಲಿ ಭಿಕ್ಷಾಟನೆ ಜಾಲ ಭೇದಿಸಲು ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
PublicNext
06/07/2022 06:42 pm