ನೆಲಮಂಗಲ: ಉಕ್ರೇನ್ ಖಾರ್ ಕೀವ್ ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ರಾಜ್ಯದ ವಿದ್ಯಾರ್ಥಿನಿ ನವ್ಯಶ್ರೀ ನೆಲಮಂಗಲಕ್ಕೆ ವಾಪಸ್ಸಾಗಿದ್ದು, ಮಗಳು ಸುರಕ್ಷಿತವಾಗಿ ಮನೆಗೆ ವಾಪಸ್ಸಾದ ಹಿನ್ನಲೆಯಲ್ಲಿ ನವ್ಯಶ್ರೀ ಪೋಷಕರು ಮನೆಯಲ್ಲಿ ಮೃತ್ಯಂಜಯ ಹೋಮ ನಡೆಸಿದ್ದಲ್ಲದೆ, ಮಗಳಿಗೆ ಸಿಹಿ ತಿನ್ನಿಸಿ ಸಂತಸ ವ್ಯಕ್ತ ಪಡಿಸಿದ್ದಾರೆ.
ಇದೇ ವೇಳೆ ಮಾತನಾಡಿದ ನವ್ಯಶ್ರೀ ಯುದ್ಧ ನಡೆಯುತ್ತೆ ಅಂತ ಮೊದಲೇ ಮಾಹಿತಿ ಇತ್ತು, ನಮ್ಮ ಕ್ಲಾಸ್ ಗಳು ಕೂಡ ನಡೆಯುತ್ತಿತ್ತು.ಆದ್ರೆ ಇಷ್ಟು ಘೋರ ಯುದ್ಧ ನಡೆಯುತ್ತೆ ಅಂದ್ಕೊಂಡಿರಲಿಲ್ಲ, 7 ದಿನ ಖಾರ್ ಕೀವ್ ನಲ್ಲೇ ಇದ್ದೆ, 3 ದಿನ ಮೆಟ್ರೋನಲ್ಲಿ, 3 ದಿನ ಫ್ಲಾಟ್ ನಲ್ಲಿದ್ವಿ. 3-4 ದಿನ ಕಳೆದ ಮೇಲಂತು ಊಟಕ್ಕೂ ಪರದಾಡಬೇಕಾಯಿತು.
ಸದ್ಯ ಜೀವ ಉಳಿದರೆ ಸಾಕಪ್ಪ ಅನ್ಸಿತ್ತು ಎಂದು ಯುದ್ಧ ಭೀಕರತೆಯನ್ನು ವಿವರಿಸಿದ್ದಾರೆ. ಪೋಷಕರು ಎಲ್ಲಿ ಹೆದರಿಕೊಳ್ತಾರೋ ಅಂತ ನಮ್ಮ ಕಷ್ಟ ಹೇಳುವ ಬದಲು ನಾವು ಚೆನ್ನಾಗಿದ್ದೀವಿ ಅಂತಲೇ ಹೇಳ್ತಿದ್ವಿ. ಸರ್ಕಾರದಿಂದ ಬಹಳ ಸಹಾಯ ಆಯ್ತು.
ನಮ್ಮ ತಂದೆ ಒಬ್ಬ ನಿವೃತ್ತ ಯೋಧ, ನಾವೂ ಅರ್ಥ ಮಾಡ್ಕೊಳ್ಬೇಕು.
ಸದ್ಯ ಸುರಕ್ಷಿತವಾಗಿ ವಾಪಸ್ ಮನೆಗೆ ಬಂದಿದ್ದೇನೆ, ಖುಷಿ ಆಗ್ತಿದೆ. ನಮಗೆ ಯಾರು ರಕ್ಷಣೆ ಮಾಡಲು ಬರ್ತಿಲ್ಲ ಅಂತ ನಾವು ಅವರಿವರ ಮೇಲೆ ಸುಮ್ನೆ ಆರೋಪ ಮಾಡೋ ಬದಲು ನಾವೂ ಕೂಡ ಅಲ್ಲಿಂದ ಹೊರಬರಲು ಪ್ರಯತ್ನಿಸುವುದು ಅಷ್ಟೇ ಮುಖ್ಯವಾಗಿತ್ತು ಎಂದಿದ್ದಾರೆ.
ಇದೇ ವೇಳೆ ಮೃತಪಟ್ಟ ಕರ್ನಾಟಕದ ವಿದ್ಯಾರ್ಥಿ ಹಾಗೂ ಆತ್ಮೀಯ ಸ್ನೇಹಿತ ನವೀನ್ ಬಗ್ಗೆ ನವ್ಯಶ್ರೀ ನೋವಿನ ಮಾತುಗಳನ್ನಾಡಿದ್ದಾರೆ.
ನಾನು ನವೀನ್ ಎಲ್ಲ ಆತ್ಮೀಯ ಸ್ನೇಹಿತ್ರು ಅವನ ಬಗ್ಗೆ ಹೇಳೋಕೆ ಹೋದ್ರೆ ಕಣ್ಣೀರು ಬರುತ್ತೆ. ಅವನು 6th ಫ್ಯಾಕಲ್ಟಿ, ನಾನು 7th ಫ್ಯಾಕಲ್ಟಿ, ಇಲ್ಲಿಂದ ಉಕ್ರೇನ್ ಗೆ ಒಟ್ಟಿಗೆ ಹೋಗ್ತಿದ್ವಿ, ವಾಪಸ್ ಒಟ್ಟಿಗೆ ಬರ್ತಿದ್ವಿ. 6 ತಿಂಗಳ ಹಿಂದೆ ಪರೀಕ್ಷೆ ಮುಗಿಸ್ಕೊಂಡು ನವೀನ್ ಸೇರಿದಂತೆ ಇನ್ನಷ್ಟು ಜನ ಒಟ್ಟಿಗೆ ಬಂದಿದ್ವಿ.
ಅವನು ನಮ್ಮಷ್ಟೇ ಸೀನಿಯರ್ ಆದ್ರು ಒಳ್ಳೆ ಮನುಷ್ಯ, ಎಲ್ಲರನ್ನ ಪ್ರೀತಿಯಿಂದ ಮಾತಾಡಿಸ್ತಿದ್ದ, ಎಲ್ಲರ ಬಗ್ಗೆ ಕಾಳಜಿ ವಹಿಸುತ್ತಿದ್ದ, ಜೂನಿಯರ್ಸ್ ಗಳಿಗೂ ತುಂಬಾ ಸಹಾಯ ಮಾಡ್ತಿದ್ದ. ಅವನು ನಮ್ಮನ್ನ ಯಾರನ್ನು ಬಿಟ್ಟು ಹೋಗಿಲ್ಲ ಅನ್ನೋದು ನಮ್ಮನಸ್ಸಿನಲ್ಲಿದೆ ಎಂದು ಭಾವುಕರಾಗಿದ್ದಾರೆ.
Kshetra Samachara
08/03/2022 11:52 am